ನೀರಾವರಿ ಯೋಜನೆ ಪೂರ್ಣಕ್ಕೆ ಎಲ್ಲ ಶಾಸಕರ ಸಭೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೧- ರಾಜ್ಯದಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಬಂಧ ಎಲ್ಲಾ ಶಾಸಕರ ಸಭೆಯನ್ನು ಕರೆಯುವುದಾಗಿ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತರ ಅವಧಿಯಲ್ಲಿ ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ ಅವರು ರಾಯಚೂರು ತಾಲ್ಲೂಕಿನ ಗಣಿಕಲ್ ಜಲಾಶಯಕ್ಕೆ ನೀರು ತುಂಬುವ ಯೋಜನೆಯ ಬಗ್ಗೆ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಉತ್ತರ ನೀಡಿದ ಡಿ.ಕೆ. ಶಿವಕುಮಾರ್ ಅವರು, ಅಧಿಕಾರಿಗಳು ನೀಡಿದ ಉತ್ತರ ಸರಿಯಿಲ್ಲ ಎಂದು ಸದಸ್ಯರು ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮತ್ತು ಸದಸ್ಯರುಗಳೊಂದಿಗೆ ಮಾತನಾಡುತ್ತೇನೆ ಎಂದರು.ನೀರಾವರಿ ಯೋಜನೆಗಳು ಅಪೂರ್ಣಗೊಂಡಿರುವ ಬಗ್ಗೆ ಇಂದು ಹಲವು ಸದಸ್ಯರು ಮಾತನಾಡಿದ್ದಾರೆ. ಹಾಗಾಗಿ ಎಲ್ಲ ಶಾಸಕರ ಸಭೆ ಕರೆದು ನೀರಾವರಿ ಯೋಜನೆಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದಾಗಿಯೂ ಹೇಳಿದರು.ಈ ತಿಂಗಳ ೧೯, ೨೦, ೨೧ ಈ ಮೂರು ದಿನಗಳಲ್ಲಿ ಒಂದು ದಿನ ಎಲ್ಲ ಶಾಸಕರ ಸಭೆ ಕರೆದು ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸುವುದಾಗಿಯೂ ಅವರು ಹೇಳಿದರು.
ಈ ಸಭೆಯಲ್ಲಿ ಶಾಸಕರ ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳು ಪೂರ್ಣಗೊಳ್ಳಲು ಏನೆಲ್ಲಾ ಆಗಬೇಕು ಎಂಬ ಬಗ್ಗೆ ಅಧಿಕಾರಿಗಳ ಸಮ್ಮುಖದಲ್ಲೇ ಚರ್ಚೆ ನಡೆಸುವುದಾಗಿಯೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.