
ಬಾಗಲಕೋಟೆ,ಫೆ.27 : ತೇರದಾಳ ಮತಕ್ಷೇತ್ರದ ಬಹುದಿನಗಳ ಬೇಡಿಕೆಯಾದ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಯಿಂದ 33 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬನಹಟ್ಟಿಯ ಎಸ್.ಆರ್.ಎ ಮೈದಾನದಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ಹಮ್ಮಿಕೊಂಡ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ಒಟ್ಟು 475 ಕೋಟಿ ರೂ.ಗಳ ವೆಚ್ಚದಲ್ಲಿ ಈ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ತೇರದಾಳ ಕ್ಷೇತ್ರದ 11 ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಈ ಕಾರ್ಯ ಕೂಡಲೇ ಕಾರ್ಯಗತಗೊಂಡು ಜಮೀನುಗಳಿಗೆ ನೀರು ದೊರೆಯುವಂತಾಗಬೇಕು ಎಂದರು.
ಈ ಯೋಜನೆಯಿಂದ ಈ ಭಾಗದ ಜಮೀನಿಗೆ ನೀರು ದೊರೆತಾಗ ಭೂಮಿತಾಯಿ ಹಸಿರು ಸೀರೆ ಉಟ್ಟಾಗ ಸಂಪತ್‍ಬರಿತವಾದ ನಾಡು ಆಗುತ್ತದೆ. ಆಗ ಭೂಮಿ ತಾಯಿ ಬಂಗಾರದ ಬೆಳೆ ಕೊಡುತ್ತಾಳೆ. ಇದರಿಂದ ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯ. ಈ ಭಾಗದ ಸಮಗ್ರ ಅಭಿವೃದ್ದಿಗಾಗಿ ನೀರಾವರಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಲು ಹತ್ತು ಹಲವು ರೂಪಿಸಲಾಗಿದೆ. ಈ ಹಿಂದೆ ನೀರಾವರಿ ಸಚಿವರಾದಾಗ ಮುಳವಾಡ ಏತ ನೀರಾವರಿ, ಚಿಮ್ಮಡ ಏತ ನೀರಾವರಿ, ಗುತ್ತಿ ಬಸವಣ್ಣ ನೀರಾವರಿ ಯೋಜನೆ ನೆನಗುದಿಗೆ ಬಿದ್ದಿದ್ದವು. ಅವುಗಳಿಗಳಿಗೆ ಕಾಯಕಲ್ಪ ನೀಡಲಾಗಿದೆ ಎಂದರು.
ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಮಾತನಾಡಿ 40 ವರ್ಷದ ಬೇಡಿಕೆಯಾದ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ದೊರೆತಿದ್ದು, ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಸರಕಾರ ಈ ಕ್ಷೇತ್ರದ ಅಭಿವೃದ್ದಿ, ನೀರಾವರಿ ಹಾಗೂ ಮೂಲಭೂತ ಸೌಲಭ್ಯಕ್ಕೆ ಸಾಕಷ್ಟು ಅನುದಾನ ನೀಡಿದೆ. ಈ ಭಾಗದಲ್ಲಿ ನೇಕಾರ ಸಮುದಾಯ ಹೆಚ್ಚಾಗಿದ್ದು, ರೈತರಿಗೆ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ನೀಡುತ್ತಿರುವ 10 ಸಾವಿರ ರೂ.ಗಳಂತೆ ನೇಕಾರರಿಗೂ ಸಹ ನೇಕಾರ ಸಮ್ಮಾನ ನಿಧಿಯಡಿ 5 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಬೊಮ್ಮಾಯಿ ಸರಕಾರ ಬಂದ ಒಂದುವರೆ ವರ್ಷದಲ್ಲಿ ಈ ಕ್ಷೇತ್ರಕ್ಕೆ 37.50 ಕೋಟಿ ರೂ.ಗಳ ಅನುದಾನ ನೀಡಿದ್ದಾರೆ ಎಂದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿದರು.
ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಂಡಿಗಣಿ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ, ಜಿ.ಪಂ ಸಿಇಓ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕುಲಗೌಡ, ಬನಹಟ್ಟಿ ನಗರಸಭೆ ಅಧ್ಯಕ್ಷ ಸಂಜಯ ತೆಗ್ಗಿ, ಉಪಾದ್ಯಕ್ಷೆ ವಿದ್ಯಾ ಲಬಾಡೆ ಸೇರಿದಂತೆ ಇತರರು ಉಪಸ್ಥಿತರಿದ್ದರು.