ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಜು.16: ಕ್ಷೇತ್ರದಲ್ಲಿ ಹೊಸದಾಗಿ ನೀರಾವರಿ ಯೋಜನೆಗಳನ್ನು ಚಾಲನೆಗೊಳಿಸಲು 93 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ತಾಲೂಕಿನ ಸಿಂಗಟಾಲೂರು ಬ್ಯಾರೇಜ್‍ಗೆ ಬಾಗಿನ ಸಮರ್ಪಿಸಿ, ಕಾಲುವೆಗಳಿಗೆ ನೀರು ಹರಿಸಲು ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರೇಹಡಗಲಿ-ಹಗರನೂರು ಏತ ನೀರಾವರಿ ಯೋಜನೆಗೆ 23 ಕೋಟಿ, ತಳಕಲ್ಲು ಕೆರೆ ಹಾಗೂ ಸರಣಿ ಚೆಕ್‍ಡ್ಯಾಂಗಳಿಗೆ ನೀರು ಹರಿಸಲು 27 ಕೋಟಿ, ಕೋಟಿಹಾಳ ಸುತ್ತಮುತ್ತಲಿನ ಕೆರೆಗಳಿಗೆ ನೀರು ತುಂಬಿಸಲು 35 ಕೋಟಿ, ಹ್ಯಾರಡ ಭಾಗದ ಕೆರೆಗಳಿಗೆ ನೀರು ಹರಿಸುವ ಶಾಕಾರ ಜಾಕ್‍ವೆಲ್‍ನಲ್ಲಿ ಹೆಚ್ಚುವರಿ ಪಂಪ್, ಮೋಟಾರ್ ಅಳವಡಿಕೆಗೆ 4 ಕೋಟಿ ರೂ. ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಸಿಂಗಟಾಲೂರು ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು ವಿಳಂಬವಾಗಿದ್ದು, ಅಧಿಕಾರಿಗಳು ಸಕಾಲದಲ್ಲಿ ಕಡತ ಸಲ್ಲಿಸದಿರುವುದು ವಿಳಂಬಕ್ಕೆ ಕಾರಣವಾಗಿದೆ. ಸಂಬಂಧಿಸಿದ ಸಚಿವರೊಂದಿಗೆ ಈ ಬಗ್ಗೆ ಮಾತನಾಡಿ, ಯೋಜನೆಗಾಗಿ ಕಾಯಂ ಭೂ ಸ್ವಾಧೀನಾಧಿಕಾರಿ ನೇಮಿಸಿ, ರೈತರಿಗೆ ಭೂ ಪರಿಹಾರ ನೀಡುವ ಪ್ರಕ್ರಿಯೆ ಮುಗಿವವರೆಗೂ ಅವರನ್ನು ವರ್ಗಗೊಳಿಸಬಾರದೆಂದು ತಿಳಿಸಲಾಗಿದೆ. ಈ ಕುರಿತು ಸದ್ಯದಲ್ಲೇ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು.
ಮುಂಗಾರು ಮಳೆ ಸುರಿಯದಿರುವುದರ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಕಾಲುವೆಗಳಿಗೆ ನೀರು ಹರಿಸಲು ಚಾಲನೆ ನೀಡಿದ್ದು, ತಾಲೂಕಿನ ಕೆರೆಗಳಿಗೆ ನೀರು ಹರಿಸಲು ಪ್ರಾರಂಭಿಸಿದ್ದು, ಇದರಿಂದ ಅಂತರ್ಜಲ ವೃದ್ದಿಯಾಗಲಿದೆ. ರೈತರು ಪೈಪ್‍ಲೈನ್ ಹಾಗೂ ವಾಲ್ವ್‍ಗಳಲ್ಲಿ ರಂಧ್ರ ಕೊರೆಯಬಾರದು. ಈ ರೀತಿಯ ಕೃತ್ಯ ಎಸಗಿದವರ ವಿರುದ್ಧ ಕಾನೂನುರೀತ್ಯ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸಿಂಗಟಾಲೂರು ಯೋಜನೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ, ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ, ಮುಖಂಡರಾದ ಹೆಚ್.ಪೂಜಪ್ಪ, ಹಣ್ಣಿ ಶಶಿಧರ, ಎಲ್.ಕೆ.ರವಿಕುಮಾರ್, ಕರೆಂಗಿ ಸುಭಾಶ್ಚಂದ್ರ, ಶಂಕರ್ ನವಲಿ, ಸಿರಾಜ್ ಬಾವಿಹಳ್ಳಿ, ಜೆ.ಪರಶುರಾಮ, ವಿಜಯಲಕ್ಷ್ಮಿ, ಭಾಗ್ಯಮ್ಮ, ಮೀರಾಬಾಯಿ ಇದ್ದರು.