ನೀರಾವರಿ, ಮೂಲಸೌಕರ್ಯಕ್ಕೆ ಆದ್ಯತೆ: ರಾಜೇಶ್‌ಗೌಡ

ತುಮಕೂರು, ನ. ೧೧- ಸಿರಾ ಕ್ಷೇತ್ರಕ್ಕೆ ನೀರಾವರಿ ಯೋಜನೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ನೂತನ ಶಾಸಕ ಡಾ. ರಾಜೇಶ್‌ಗೌಡ ತಿಳಿಸಿದರು.
ಕಳೆದ ೪೦ ವರ್ಷದಿಂದ ಮದಲೂರು ಕೆರೆಗೆ ನೀರು ಹರಿಸುವ ಯೋಜನೆ ನೆನೆಗುದಿಗೆ ಬಿದ್ದಿತ್ತು. ೨೦೦೮ ರಿಂದಲೇ ಮದಲೂರು ಕೆರೆ ನೀರು ಬಿಡಬೇಕಾಗಿತ್ತು. ಅಂದಿನಿಂದಲೂ ನೀರು ಬಿಡಲು ಸಾಧ್ಯವಾಗಿರಲಿಲ್ಲ. ಮದಲೂರು ಕೆರೆ ನೀರು ಬರಬೇಕು ಎಂಬುದು ಜನರ ಅಪೇಕ್ಷೆಯಾಗಿದೆ. ಹಾಗಾಗಿ ಈ ಬಾರಿ ಕ್ಷೇತ್ರದ ಜನತೆ ನನ್ನ ಕೈ ಹಿಡಿದಿದ್ದಾರೆ ಎಂದರು.
ಸಾಮೂಹಿಕ ನಾಯಕತ್ವ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಂದಾಗಿ ಬಿಜೆಪಿಗೆ ಗೆಲುವು ಬಂದಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಜಿಲ್ಲಾಧ್ಯಕ್ಷ ಸುರೇಶ್‌ಗೌಡ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮುಖಂಡರಾದ ಬಿ.ಕೆ. ಮಂಜುನಾಥ್, ಎಸ್.ಆರ್. ಗೌಡ ಸೇರಿದಂತೆ ಪಕ್ಷದ ಎಲ್ಲ ನಾಯಕರು, ಮುಖಂಡರುಗಳ ಶ್ರಮದ ಫಲ ಸಿರಾದಲ್ಲಿ ತಾವು ಗೆಲ್ಲಲು ಪ್ರಮುಖ ಕಾರಣವಾಗಿದೆ ಎಂದರು.
ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸಂಘಟನಾತ್ಮಕವಾಗಿ ಸುಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ ಎಂದರು.
ನೀರಾವರಿ ಯೋಜನೆ, ಮೂಲಭೂತ ಸೌಕರ್ಯಗಳ ಕೊರತೆ ಕಾಂಗ್ರೆಸ್ ಸೋಲಿಗೆ ಕಾರಣವಾಗಿರಬಹುದು ಎಂದ ಅವರು, ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್, ಉಜ್ವಲ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳು ನಮ್ಮ ಗೆಲುವಿಗೆ ಸಹಕಾರಿಯಾಗಿವೆ ಎಂದರು.
ಜೆಡಿಎಸ್‌ಗೆ ಅನುಕಂಪದ ಅಲೆ ಖಂಡಿತವಾಗಿಯೂ ಕೈ ಹಿಡಿದಿಲ್ಲ ಎಂದು ಅವರು ಹೇಳಿದರು.
ಕ್ಷೇತ್ರದ ಪ್ರಬುದ್ಧ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು, ನನ್ನ ಗೆಲುವಿಗೆ ಕಾರಣಕರ್ತರಾಗಿರುವ ಪಕ್ಷದ ನಾಯಕರಿಗೂ ನನ್ನ ಕೃತಜ್ಞತೆ ಹೇಳುತ್ತೇನೆ ಎಂದರು.
ಟಿಕೆಟ್ ಆಕಾಂಕ್ಷಿಗಳಾಗಿದ್ದ ಬಿ.ಕೆ. ಮಂಜುನಾಥ್ ಹಾಗೂ ಎಸ್.ಆರ್. ಗೌಡ ಅವರು ಟಿಕೆಟ್ ನನಗೆ ಕೊಡಿಸುವ ಮೂಲಕ ತ್ಯಾಗ ಮಾಡಿದ್ದಾರೆ. ಅವರ ಶ್ರಮ, ತ್ಯಾಗಕ್ಕೆ ನಾನು ಚಿರಋಣಿಯಾಗಿರುತ್ತೇನೆ ಎಂದರು.
ಮುಂದಿನ ಎರಡೂವರೆ ವರ್ಷ ಅವಧಿಯಲ್ಲಿ ನಾನು ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಲ್ಲಿ ಸಂಚರಿಸಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಬೇಕಾಗಿರುವುದರಿಂದ ನನ್ನ ಜವಾಬ್ದಾರಿ ಜಾಸ್ತಿಯಾಗಿದೆ ಎಂದರು.
ಉಪಚುನಾವಣೆಯಲ್ಲಿ ಹಣ, ಹೆಂಡ ಕೆಲಸ ಮಾಡಿದೆ ಎಂಬ ಕಾಂಗ್ರೆಸ್ ಆರೋಪ ಶುದ್ಧ ಸುಳ್ಳು. ಆ ರೀತಿಯ ಯಾವುದೇ ಕೆಲಸಗಳನ್ನು ನಮ್ಮ ಪಕ್ಷದಲ್ಲಿ ಮಾಡಿಲ್ಲ ಎಂದರು.
ಕ್ಷೇತ್ರದ ಜನ ಬದಲಾವಣೆ ಬಯಸಿ ಇಂದು ಕಮಲವನ್ನು ಅರಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.