ನೀರಾವರಿ ಪಂಪ್‍ಸೆಟ್ಟುಗಳಿಗೆ ಮೀಟರ್ ಹಾಕುವುದು ವಿರೋಧಿಸಿ ರೈತರ ಪ್ರತಿಭಟನೆ

ಕಲಬುರಗಿ.ಸೆ.14: ನೀರಾವರಿ ಪಂಪ್‍ಸೆಟ್ಟುಗಳಿಗೆ ಮೀಟರ್ ಹಾಕುವುದನ್ನು ನಿಲ್ಲಿಸಿ ಪಂಪ್‍ಸೆಟ್ಟುಗಳಿಗೆ ಉಚಿತ ವಿದ್ಯುತ್ ಪೂರೈಸುವಂತೆ ಹಾಗೂ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬುಧವಾರ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕೊಂಚಾವರಂ ಅತೀ ಹಿಂದುಳಿದ ಪ್ರದೇಶ. ಬಡತನದಿಂದ ದುಡಿಯುವ ಜನರ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಡತನದಿಂದ ಮಕ್ಕಳ ಮಾರಾಟ ಪ್ರಕರಣಗಳು ನಡೆದಿವೆ. ಹೀಗಾಗಿ ಮಕ್ಕಳಿಗೆ ರಕ್ಷಣೆ ಕೊಡುವಂತೆ ಒತ್ತಾಯಿಸಿದರು.
ಕುಂಚಾವರಂ ಸಮಾಜ ಕಲ್ಯಾಣ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಮತ್ತು ವಸತಿ ಶಾಲೆಗಳಲ್ಲಿ ಸಿಸಿ ಟಿವ್ಹಿ ಕ್ಯಾಮೆರಾಗಳನ್ನು ಅಳವಡಿಸುವಂತೆ, ವಸತಿ ನಿಲಯದ ಹೊಸ ಕಟ್ಟಡ ನಿರ್ಮಿಸುವಂತೆ ಅವರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿದ್ದರಿಂದ ಹಸಿ ಬರಗಾಲ ಘೋಷಿಸುವಂತೆ, ಹಾನಿಯಾದ ಬೆಳೆಗಳಿಗೆ ಪ್ರತಿ ಎಕರೆಗೆ 25000ರೂ.ಗಳ ಪರಿಹಾರ ಕೊಡುವಂತೆ, ರೈತರ ಜಮೀನು ಅಳತೆ ಮಾಡಿಸಲು ಅರ್ಜಿ ಸಲ್ಲಿಸಿದರೂ ಕುಂಟು ನೆಪ ಹೇಳಿ ಸತಾಯಿಸುತ್ತಿದ್ದು ಅರ್ಜಿ ಸಲ್ಲಿಸಿದ ಎಲ್ಲ ರೈತರ ಜಮೀನು ಅಳತೆ ಮಾಡುವಂತೆ ಅವರು ಒತ್ತಾಯಿಸಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಖಾತೆ ಹೋಲ್ಡ್ ಮಾಡಿ ರೈತರಿಗೆ ಸತಾಯಿಸುವ ಪದ್ದತಿ ಕೈಬಿಡುವಂತೆ, ಸಂಕಷ್ಟಕ್ಕೆ ಸಿಲುಕಿರುವ ರೈತರ ಸಮಸ್ಯೆ ಪರಿಹರಿಸುವಂತೆ, ರೈತರ ಸಾಲ ಮನ್ನಾ ಮಾಡುವಂತೆ, ಬೀಜ, ರಸಗೊಬ್ಬರ ಬೆಲೆ ಏರಿಕೆಯನ್ನು ಕೈ ಬಿಡುವಂತೆ, ಗೊಬ್ಬರದ ಕೊರತೆ ಕಾಣುತ್ತಿದ್ದು, ಸಮರ್ಪಕ ರಸಗೊಬ್ಬರ ಪೂರೈಸುವಂತೆ, ಬೆಳೆ ನಷ್ಟವಾದ ಬೆಳೆಗಳಿಗೆ ಪೂರ್ಣ ಪ್ರಮಾಣದ ಬೆಳೆ ವಿಮೆ ಮಂಜೂರು ಮಾಡುವಂತೆ ಅವರು ಆಗ್ರಹಿಸಿದರು.
ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗಳಿಗೆ ಮತ್ತು ಬಸವನ ಹುಳು ಶಂಕದ ಹುಳುಗಳು ಮೊಳಕೆ ತಿಂದು ಹಾನಿಯಾದ ಬೆಳೆಗಳಿಗೂ ಬೆಳೆ ವಿಮೆ ಹಾಗೂ ನಷ್ಟದ ಪರಿಹಾರ ಕೊಡುವಂತೆ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೃಷಿ ಕೂಲಿಕಾರರಿಗೆ ಸರಿಯಾದ ಸಮಯಕ್ಕೆ ಕೆಲಸ ಕೊಡುವಂತೆ, ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ, ಎಲ್ಲ ರೈತರಿಗೂ ಬೆಳೆ ವಿಮೆ ಸಿಗುವಂತೆ ಕ್ರಮ ಕೈಗೊಳ್ಳುವಂತೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಅರ್ಧಕ್ಕೆ ನಿಂತ ಮಾಶಾಸನ ಬಿಡುಗಡೆ ಮಾಡುವಂತೆ, ವಯಸ್ಸಾದ ರೈತರಿಗೆ ಪ್ರತಿ ತಿಂಗಳು 5000ರೂ.ಗಳ ಮಾಶಾಸನ ಒದಗಿಸುವಂತೆ, ಪ್ರತಿ ಗ್ರಾಮ ಪಂಚಾಯಿತಿ ಮೂಲಕ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯ ಕಟ್ಟಿಸಿಕೊಡುವಂತೆ ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾಯಿಬಣ್ಣ ಗುಡುಬಾ, ರಾಯಪ್ಪ ಹರಮುಂಜಿ, ಸುಭಾಷ್ ಹೊಸಮನಿ ಜೇವರ್ಗಿ, ದಿಲೀಪ್ ನಾಗೂರೆ, ಜಾಫರ್‍ಖಾನ್, ಪ್ರಭು ಪ್ಯಾರಾಬದ್ದಿ, ಪರಮೇಶ್ವರ್ ಕಾಂತಾ, ಸಿದ್ದಪ್ಪ ಕಲಶೆಟ್ಟಿ, ಪಾಂಡುರಂಗ್ ಮಾವಿನಕರ್, ಸಿದ್ದಾರ್ಥ ಠಾಕೂರ್, ಪ್ರಕಾಶ್ ಜಾನೆ, ವಿಠಲ್ ಯಳವಂತಗಿ ಸೇರಿ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.