ನೀರಾವರಿ ಪಂಪ್‍ಸೆಟ್‍ಗಳಿಗೆ 5 ರಿಂದ 6 ಗಂಟೆ ವಿದ್ಯುತ್ ಪೂರೈಕೆ: ಎಂಡಿ ಕರಿಲಿಂಗಣ್ಣವರ್‌

ಕಲಬುರಗಿ,ಅ.25:ಕಲಬುರಗಿ ದಕ್ಷಿಣ ಭಾಗದಲ್ಲಿ ಬರುವ ಅನೇಕ ಹಳ್ಳಿಗಳಲ್ಲಿರುವ ನೀರಾವರಿ ಪಂಪ್‌ಸೆಟ್‌ ಬಳಸುವ ರೈತರು ಸರಿಯಾಗಿ ವಿದ್ಯುಚ್ಚಕ್ತಿ ಪಡೆಯಲಾಗುತ್ತಿಲ್ಲ, ಇದಕ್ಕೆ ಅಲ್ಲಿನ ವಿದ್ಯುತ್‌ ಪರಿವರ್ತಕಗಳ ಕೊರತೆಯೇ ಕಾರಣ. ತಕ್ಷಣ ಹೆಚ್ಚುವರಿ ವಿದ್ಯುತ್‌ ಪರಿವರ್ತಕಗಳನ್ನು (ಟ್ರಾನ್ಸಫಾರ್ಮರ್‌) ಅಳವಡಿಸುವ ಮೂಲಕ ರೈತರನ್ನು ಕಾಡುತ್ತಿರುವ ವಿದ್ಯುತ್ ಕೊರತೆಯ ಸಮಸ್ಯೆ ನೀಗಿಸುವಂತೆ ಆಗ್ರಹಿಸಿ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ನೇತೃತ್ವದಲ್ಲಿ ರೈತರ ನಿಯೋಗ ಬುಧವಾರ ಜೆಸ್ಕಾಂ ವ್ವಸ್ಥಾಪಕ ನಿರ್ದೆಶಕರಾದ ರವೀಂದ್ರ ಕರಿಲಿಂಗಣ್ಣವರ್‌ ಅವರನ್ನು ಭೇಟಿ ಮಾಡಿ ಆಗ್ರಹಿಸಿತು.

ಭೀಮಳ್ಳಿ, ಹಡಗಿಲ್‌, ಪಟ್ಟಣ, ಸಾವಳಗಿ, ಮೇಳಕುಂದಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸರಿಯಾಗಿ ವಿದ್ುಚ್ಚಕ್ತಿ ಪೂರಕೆಯಾಗದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆಂದು ಶಸಾಕ ಅಲ್ಲಂಪ್ರಭು ಪಾಟೀಲರು ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆಎಳೆಯಾಗಿ ಎಂಡಿ ರವೀಂದ್ರ ಅವರ ಮುಂದೆ ವಿವರಿಸಿದರು.

ಮೊದಲೇ ಮಲೆ ಇಲ್ಲ. ಲಭ್ಯವಿರುವ ನೀರನ್ನು ಬಳಸಿ ಬೆಳೆ ಉಳಿಸಬೇಕಾದರೆ ಕರೆಂಟ್‌ ಕೊರತೆ ಕಾಡುತ್ತಿದೆ. ನೀರಾವರಿ ಪಂಪ್‌ಸೆಟ್‌ ಹೆಚ್ಚಾಗಿದ್ದರಿಂದ ಅಲ್ಲಿರುವ ಟಿಸಿ ಸರಿಯಾಗಿ ಕೆಲಸ ಮಾಡದೆ ಟ್ರಿಪ್‌ ಆಗುತ್ತಿದೆ. ಪದೇ ಪದೇ ಆಗುತ್ತಿರುವ ಈ ಸಮಸ್ಯೆಗೆ ಕಾಯಂ ಪರಿಹಾರ ತಾವು ನೀಡಬೇಕು. ಹೆಚ್ಚುವರಿ ಟೀಸಿ ಅಲ್ಲಿ ಅಳವಡಿಸಿ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.


ನೀರಾವರಿ ಪಂಪ್‌ಸೆಟ್‌ ರೈತರ ಸಮಸ್ಯೆಗೆ ಶೀಘ್ರ ಪರಿಹಾರ- ಎಂಡಿ ಭರವಸೆ

ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲರ ನೇತೃತ್ವದ ನಿಯೋಗದೊಂದಿಗೆ ಮಾತುಕತೆ ನಡೆಸಿರುವ ಜೆಸ್ಕಾಂ ಎಂಡಿ ರವೀಂದ್ರ ಕರಿಲಿಂಗಣ್ಣವರ್‌ ಅವರು ಜೆಸ್ಕಾಂ ವ್ಯಾಪ್ತಿಯ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿನ ಕಬ್ಬು, ಭತ್ತ, ತೊಗರಿ ಮತ್ತು ಇತರೆ ಬೆಳೆಗಳಿಗೆ ಕೃಷಿ ನೀರಾವರಿ ಪಂಪ್ ಸೆಟ್‍ಗಳಿಗೆ ಈಗಾಗಲೇ ಅಕ್ಟೋಬರ್ 19 ರಿಂದ ಹಗಲು ವೇಳೆಯಲ್ಲಿಯೇ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ 3-ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರೈತರು ತಮ್ಮ ಕಬ್ಬು ಹಾಗೂ ಇತರೆ ಬೆಳೆಗಳಿಗೆ ಹೆಚ್ಚಿನ ಸಮಯದ ವಿದ್ಯುತ್ ಪೂರೈಸಬೇಕೆಂದು ಕೋರಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಮುಂಗಾರು ವೈಫಲ್ಯದ ನಡುವೆಯೂ ರಾಜ್ಯ ಸರ್ಕಾರವು ವಿದ್ಯುತ್ ಕೊರತೆಯನ್ನು ಸರಿದೂಗಿಸಲು ಬೇರೆ ಮೂಲಗಳಿಂದ ವಿದ್ಯುತ್ ಖರೀದಿಸಿ ರೈತರಿಗೆ ವಿದ್ಯುತ್ ಪೂರೈಕೆಗೆ ಸರ್ಕಾರ ಆದೇಶಿಸಿರುತ್ತದೆ.

ಅದರಂತೆ ನಿಗಮದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ 3-ಫೇಸ್ ವಿದ್ಯುತ್ ಪೂರೈಸುವಂತೆ ಜೆಸ್ಕಾಂ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕಲಬುರಗಿ ದಕ್ಷಿಣ ಸೇರಿದಂತೆ ಜಿಲ್ಲೆಯಲ್ಲಿರುವ ವಿದ್ಯುತ್‌ ಟ್ರಾನ್ಸಫಾರ್ಮರ್‌ ಕೊರತೆ ಸಹ ತಕ್ಷಣ ನೀಗಿಸಿ ರೈತರಿಗೆ ತಡೆ ರಹಿತ ಕರೆಂಟ್‌ ಪೂರೈಕೆಗೆ ತಾವು ಅಗತ್ಯ ಕ್ರಮ ಜರುಗಿಸೋದಾಗಿಯೂ ಎಂಡ ರವೀಂದ್ರ ಅವರು ಭರವಸೆ ನೀಡಿದ್ದಾರೆ.