ನೀರಾವರಿ ಕ್ರಾಂತಿ ಮಾಡಿದ್ದೇನೆ: ಗುತ್ತೇದಾರ

ಅಫಜಲಪುರ:ಎ.19: ನಮ್ಮ ಪೂಜ್ಯ ತಂದೆಯವರ ಹಾಗೂ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಸತತ ಆರು ಭಾರಿ ಶಾಸಕ ಮತ್ತು ಸಚಿವನಾಗಿ ಈ ಮತಕ್ಷೇತ್ರದಲ್ಲಿ ನೀರಾವರಿ ಕ್ರಾಂತಿ ಮಾಡಿದ್ದೇನೆ ಇದರಿಂದ ಈ ಭಾಗದ ರೈತರು ಜಿಲ್ಲೆಯಲ್ಲಿ ಅತಿ ಹೆಚ್ಚು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯಾ ಗುತ್ತೇದಾರ ಹೇಳಿದರು.

ತಾಲೂಕಿನ ಘಳನೂರ ಗ್ರಾಮದ ಹತ್ತಿರ ಭೀಮಾ ನದಿಗೆ ನೀರು ಬಿಡುವಂತೆ ಒತ್ತಾಯಿಸಿ 12ನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ಈ ಸಮಸ್ಯೆ ಬಗ್ಗೆ ಈಗಾಗಲೇ ನಾನು ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತ, ಸಹಾಯಕ ಆಯುಕ್ತ ಅವರ ಜೊತೆ ಚರ್ಚೆ ಮಾಡಿದ್ದೇನೆ.ಈ ಭಾಗದ ರೈತರು ಎಲ್ಲರೂ ಸಹ ನನ್ನ ಅಣ್ಣ ತಮ್ಮಂದಿರು ಇದ್ದಂತೆ ಹೀಗಾಗಿ ಯಾವುದೇ ರೈತರಿಗೆ ಸಹ ಅನ್ಯಾಯ ಆಗಲು ಬಿಡುವುದಿಲ್ಲ ಆದ್ದರಿಂದ ಭೀಮಾ ನದಿಯ ಸೊನ್ನ ಬ್ಯಾರೇಜ್ ನಿಂದ ನೀರುಬಿಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ.ಅದೇ ರೀತಿ ದೇಸಾಯಿ ಕಲ್ಲೂರ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ತಡೆಗೋಡೆಯನ್ನು ಒಂದು ಬದಿ ತೆಗೆದುಹಾಕಿ ನೀರುಬಿಡಲು ತಾಲೂಕಾ ಆಡಳಿತಕ್ಕೆ ಸೂಚನೆ ನೀಡುತ್ತೇನೆ ಎಂದು ತಿಳಿಸಿದ ಅವರು ಇಷ್ಟೆಲ್ಲಾ ಸಮಸ್ಯೆಗೆ ಕಾರಣೀಭೂತರಾದ ಘೂಳನೂರ ಹಾಗೂ ಮೊಗನಇಟಗಾ ನಡುವೆ ಬ್ಯಾರೇಜ್ ಕಂ ಬ್ರಿಡ್ಜ್ ಕಾಮಗಾರಿಯ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರ ಗಮನಕ್ಕೆ ತರಲಾಗುವುದು.ಧರಣಿ ಸ್ಥಳಕ್ಕೆ ನಾನು ಬಂದಿರುವುದು ಯಾವುದೇ ರಾಜಕಾರಣ ಮಾಡುವುದಕ್ಕಾಗಿ ಅಲ್ಲ ರೈತರ ಸಮಸ್ಯೆ ಬಗೆಹರಿಸಲು ಬಂದಿದ್ದೇನೆ ಹೀಗಾಗಿ ಇಲ್ಲಿಗೆ ಧರಣಿ ಸತ್ಯಾಗ್ರಹ ಕೈಬಿಡಿ ಎಂದು ಮನವಿ ಮಾಡಿದ್ದರು.

ಧರಣಿ ಸ್ಥಳದಲ್ಲಿ ಪಿಎಸ್ಐ ಭೀಮರತ್ನ ಸಜ್ಜನ,ರೈತ ಮುಖಂಡರಾದ ಚಂದ್ರಾಮ ಬಿದನೂರ, ಮಹಾಂತಯ್ಯ ಹಿರೇಮಠ, ನಿಂಗಣ್ಣ ಕಿರಿಸಾವಳಗಿ, ಶಿವರಾಯ‌ ಚಿಂಚೊಳಿ, ಭೀಮರಾಯಗೌಡ ಪಾಟೀಲ್, ದತ್ತುಗುರು ಬಿದನೂರ, ವೀರಭದ್ರ ಪಾಟೀಲ್, ಮಾರುತಿ ಜಮಾದಾರ, ಶ್ರೀಶೈಲ ಗೌಡ, ದೌಲತ್ ರಾವ್ ಪಾಟೀಲ್, ದತ್ತು ಕೋಣ ಸಿರಸಗಿ, ಪೀರಪ್ಪ ಸಾತಿಹಾಳ, ಪೀರುಗೌಡ ಗಾಣಗಾಪುರ, ಕರೆಪ್ಪ ಸಿದ್ನಾಳ, ಗಂಗಪ್ಪ ಸಿದ್ನಾಳ, ಮಲ್ಲು ಜಮಾದಾರ, ಭೂತಾಳಿ ಜಮಾದಾರ, ಮಾಳಪ್ಪ ಕಿರಸಾವಳಗಿ, ಮಲ್ಕಣ್ಣ ಕುಂಬಾರ, ನಾಗಣ್ಣ ಹಳ್ಳಿ ಸೇರಿದಂತೆ ಇತರರು ಇದ್ದರು.