ನೀರಾವರಿ ಇಲಾಖೆ ಇಂಜಿನಿಯರ್‌ಗಳಿಗೆ ಕಾಲುವೆಗಳ ದುಸ್ಥಿತಿ ದರ್ಶನ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೩: ಮಾಯಕೊಂಡ ಕ್ಷೇತ್ರದ ಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಶಿಥಿಲಗೊಂಡ ಕಾಲುವೆ ಮತ್ತು ಸೇತುವೆಗಳನ್ನು ಶಾಸಕ ಕೆ.ಎಸ್.ಬಸವಂತಪ್ಪ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ರೈತ ಮುಖಂಡರ ಒತ್ತಾಯದ ಹಿನ್ನೆಲೆಯಲ್ಲಿ ಕ್ಷೇತ್ರದ ವ್ಯಾಪ್ತಿಯ ಕುರ್ಕಿ, ಕಲ್ವೋರು, ಅಣಬೇರು, ಹಿರೇತೋಗಲೇರಿ ಸೇರಿದಂತೆ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಗ್ರಾಮಗಳ ಕಾಲುವೆಗಳಿಗೆ ಭೇಟಿ ನೀಡಿದ ಶಾಸಕರು, ಶಿಥಿಲಗೊಂಡ ಕಾಲುವೆಗಳು, ಸೇತುವೆಗಳನ್ನು ಅಧಿಕಾರಿಗಳಿಗೆ ತೋರಿಸುವ ಮೂಲಕ ಕಾಲುವೆಯ ಅವ್ಯವಸ್ಥೆಯ ದರ್ಶನ ಮಾಡಿಸಿದರು.ಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಕಾಲುವೆಗಳನ್ನು ನಿರ್ಮಿಸಿ ಸುಮಾರು ೫೪ ವರ್ಷಗಳು ಕಳೆದಿವೆ. ಅಲ್ಲಿಂದ ಈವರೆಗೂ ಕಾಲುವೆಗಳ ದುರಸ್ತಿಯಾಗಿಲ್ಲ. ಕಾಲುವೆ ನೀರು ಹರಿಸಿದಾಗ ಮತ್ತು ಮಳೆ ಬಂದಾಗ ಸೇತುವೆಗಳು ಶಿಥಿಲಗೊಂಡು ಈಗಾಗಲೇ ಬುನಾದಿ ಕಿತ್ತುಕೊಂಡು ಹೋಗಿ ಕಲ್ಲುಗಳು ಮಾತ್ರ ಉಳಿದಿವೆ.ಮತ್ತೆ ಈಗ ಕಾಲುವೆಗೆ ನೀರು ಹರಿಸಿದರೆ ಶಿಥಿಲಗೊಂಡ ಸೇತುವೆಗಳು ಕಿತ್ತುಕೊಂಡು ಹೋಗುತ್ತವೆ. ಅಷ್ಟೇ ಅಲ್ಲ, ಗದ್ದೆಗಳಿಗೆ ನೀರು ನುಗ್ಗಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದ ಭತ್ತದ ಸಸಿಗಳು ನೀರಿನೊಂದಿಗೆ ಕೊಚ್ಚಿ ಹೋಗುತ್ತದೆ. ಮತ್ತೆ ನೀರು ನಿಲ್ಲಿಸಿದರೆ, ಇತ್ತ ನೀರು ವ್ಯರ್ಥ, ಅತ್ತ ರೈತರ ಪರಿಶ್ರಮವೂ ವ್ಯರ್ಥ. ಇದು ತಪ್ಪಬೇಕಾದರೆ ೨೦ ರಿಂದ ೨೫ ಕೋಟಿ ರೂ. ವೆಚ್ಚದಲ್ಲಿ ವೈಜ್ಞಾನಿಕವಾಗಿ ಗುಣಮಟ್ಟದ ಸೇತುವೆಗಳನ್ನು ನಿರ್ಮಿಸಿದರೆ ರೈತರ ಹಿತ ಕಾಪಾಡಿದಂತಾಗುತ್ತದೆ. ಜೊತೆಗೆ ಕೊನೆ ಭಾಗದ ರೈತರಿಗೂ ನೀರು ತಲುಪತ್ತದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.ಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕಾಲುವೆಗಳು ದುಸ್ಥಿತಿ ಬಗ್ಗೆ ಸಂಬಂಧಪಟ್ಟ ನೀರಾವರಿ ಇಲಾಖೆ ಇಂಜಿನಿಯರ್‌ಗಳು ಆಗಿಂದಾಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಲುವೆಗಳು ಮತ್ತು ಸೇತುವೆಗಳ ಗುಣಮಟ್ಟದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಒಂದು ವೇಳೆ ಶಿಥಿಲಗೊಂಡಿದ್ದರೆ ಕೂಡಲೇ ದುರಸ್ತಿಪಡಿಸುವ ಕೆಲಸ ಮಾಡಿದರೆ ಇಂತಹ ಸ್ಥಿತಿ ಬರುವುದಿಲ್ಲ. ನೀವು ಸ್ಥಳಕ್ಕೆ ಭೇಟಿ ನೀಡಿ ಕಾಲುವೆಗಳು ಮತ್ತು ಸೇತುವೆಗಳನ್ನು ಸುಸ್ಥಿತಿಯಲ್ಲಿಡುವ ಕೆಲಸ ಮಾಡಬೇಕೆಂದು ಸ್ಥಳದಲ್ಲಿದ್ದ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಎಇಇ ಮನೋಜ್‌ಕುಮಾರ್, ಜೆಇ ಪರಮೇಶ್ವರಪ್ಪ ಹಾಗೂ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರೈತ ಮುಖಂಡರು ಹಾಜರಿದ್ದರು.