ನೀರಾವರಿ ಅಚ್ಚುಕಟ್ಟು ಪ್ರದೇಶಗಳ ಅಭಿವೃದ್ದಿ, ಜಲಾಶಯಗಳ ಅಭಿವೃದ್ದಿಗೆ ಹೆಚ್ಚು ಅದ್ಯತೆ

ಚಾಮರಾಜನಗರ, ಆ.01:- ಜಿಲ್ಲೆಯ ವ್ಯಾಪ್ತಿಯ ಜಮೀನುಗಳು ನಾಲೆಗಳು ಹಾಗೂ ಅಚ್ಚುಕಟ್ಟು ಪ್ರದೇಶಗಳಿಗೆ ಪ್ರಥಮ ಅಧ್ಯತೆ ನೀಡುವ ಜೊತೆಗೆ ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಇತರೇ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ, ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಕಾರ್ಯೋನ್ಮುಖನಾಗುತ್ತೇನೆ ಎಂದು ನೂತನ ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು ತಿಳಿಸಿದರು.
ನಗರದ ನಿಜಗುಣ ರೆಸಾರ್ಟ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿÀ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಮುಖಂಡರು ಸೇರಿದಂತೆ ನನ್ನ ಮೇಲೆ ವಿಶ್ವಾಸವಿಟ್ಟು ಕಾಡಾ ಅಧ್ಯಕ್ಷ ಪದವಿಯನ್ನು ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ಅವರ ನಿರೀಕ್ಷೆಗೂ ಮೀರಿ ಹೆಚ್ಚು ಕೆಲಸ ಮಾಡುವ ಇಚ್ಚೆ ನನ್ನದಾಗಿದೆ.
ಚಾಮರಾಜನಗರ ಜಿಲ್ಲೆ ನನ್ನ ಕರ್ಮ ಭೂಮಿ: ಚಾಮರಾಜನಗರ ಜಿಲ್ಲೆ ನನ್ನ ಕರ್ಮ ಭೂಮಿಯಾಗಿದ್ದು, ಈ ಭಾಗದಲ್ಲಿರುವ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯಗಳು ಹಾಗೂ ಗುಂಡಾಲ್ ಡ್ರಾಂ ಕಾಡಾ ವ್ಯಾಪ್ತಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಡ್ಯಾಂಗಳ ವ್ಯಾಪ್ತಿಯಲ್ಲಿರುವ ರೈತರ ಸಮಸ್ಯೆಗಳನ್ನು ಬಗೆಹರಿಸುವುದು. ಅಚ್ಚುಕಟ್ಟುದಾರರ ರೈತರ ಸಮಸ್ಯೆಯನ್ನು ಆಲಿಸಿ, ಪರಿಹರಿಸುವ ಮೂಲಕ ಹೊಳೆ ಭಾಗದಲ್ಲಿರುವ ರೈತರು ಹಾಗೂ ಅಚ್ಚುಕಟ್ಟು ಪ್ರದೇಶದ ರೈತರೊಂದಿಗೆ ಸಮನ್ವತೆಯನ್ನು ಸಾಧಿಸಿ, ವಿಶೇಷ ಕಾರ್ಯಯೋಜನೆಗಳನ್ನು ಅನುಷ್ಠಾನ ಮಾಡುವುದಾಗಿ ತಿಳಿಸಿದರು.
ಈ ಎರಡು ಡ್ಯಾಂಗಳು ಈ ಭಾಗದ ರೈತರ ಜೀವನಾಡಿಯಾಗಿದೆ. ಇವುಗಳ ಪ್ರಗತಿ, ನಾಲೆಗಳ ದುರಸ್ತಿ, ದೊಡ್ಡಕೆರೆ, ಚಿಕ್ಕಕೆರೆ, ಸಿಂಡಕೆರೆಗಳ ಅಭಿವೃದ್ದಿ ಮತ್ತು ಕೆರೆಗಳಿಗೆ ನೀರು ತುಂಭಿಸಲು ಹೆಚ್ಚಿನ ಒತ್ತು, ಕಾಲುವೆಗಳ ದುರಸ್ತಿಗೆ ಕ್ರಮ ವಹಿಸುತ್ತೇನೆ. ಕಾವೇರಿ ಜಲಾನಯನ ಅಚ್ಚಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 19 ಡ್ಯಾಂಗಳು ಸೇರಿವೆ. ನೀರು ಬಳಕೆದಾರರ ಸಂಘ, ಅಚ್ಚುಕಟ್ಟು ಪ್ರದೇಶದ ಮುಖ್ಯ ನಾಲೆಗಳು ಹೊರತು ಪಡಿಸಿ, ಇತರೇ ನಾಲೆಗಳು ಕಾಡಾ ವ್ಯಾಪ್ತಿಗೆ ಬರುತ್ತದೆ.
ನನ್ನ ಹೊಲ, ನನ್ನ ರಸ್ತೆ ಯೋಜನೆ: ಯು ಬಹಳ ಪ್ರಮುಖ್ಯತೆಯನ್ನು ಹೊಂದಿದ್ದು, ಇದರಲ್ಲಿ ಕೃಷಿ ವಿಭಾಗ, ಇಂಜಿನಿಯರ್ ವಿಭಾಗ ಹಾಗೂ ನೀರಾವರಿ ವಿಭಾಗಗಳಿರುತ್ತದೆ. ಕೃಷಿ ವಿಭಾಗದಲ್ಲಿ ಕೃಷಿ ಹೊಂಡಾ, ಇಂಗು ಗುಂಡಿ ಸೇರಿದಂತೆ ಅನೇಕ ಯೋಜನೆಗಳು ಇದ್ದು, ಅನುದಾನದ ಲಭ್ಯತೆಯೊಂದಿಗೆ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಾಗಿ ನಿಜಗುಣರಾಜು ತಿಳಿಸಿದರು.
ನಾಳೆ ಸೋಮವಾರ ಅಧಿಕಾರಿಗಳ ಸಭೆ ನಡೆಸಿ, ಕಾಡಾ ವ್ಯಾಪ್ತಿಯ ಕಾರ್ಯಾಭಾರ ಮತ್ತು ಇತರೇ ವಿಚಾರಗಳನ್ನು ಚರ್ಚೆ ಮಾಡಿ ಮುಂದಿನ ಕಾರ್ಯಯೋಜನೆಗಳನ್ನು ತಿಳಿಸುವವನಿದ್ದೇನೆ. ಸಭೆ ನಂತರ ಬೆಂಗಳೂರಿಗೆ ತೆರೆಳಿ ಮುಖ್ಯಮಂತ್ರಿಗಳು, ನೀರಾವರಿ ಸಚಿವರು ಭೇಟಿ ಮಾಡಿ, ಅಭಿನಂದಿಸುವ ಜೊತೆಗೆ ಅನುದಾನ ನೀಡುವಂತೆ ಕೋರಿಕೆಯನ್ನು ಸಲ್ಲಿಸುವುದಾಗಿ ತಿಳಿಸಿದರು.
ಬಿಜೆಪಿ ವರಿಷ್ಠರು ಕಾಡಾ ಅಧ್ಯಕ್ಷ ಪದವಿಯನ್ನು ನೀಡುವ ಮೂಲಕ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಸಂಘಟನೆಯ ಜವಾಬ್ದಾರಿಯನ್ನು ನೀಡಿದ್ದಾರೆ. ಚಾಮರಾಜನಗರ ಜಿಲ್ಲೆ ಸೇರಿದಂತೆ ಮೈಸೂರು, ಮಂಡ್ಯ, ಮಡಿಕೇರಿ ಹಾಗೂ ಹಾಸನ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇನೆ.
ನಾನು ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್‍ನ ಪ್ರಬಲ ಆಕಾಂಕ್ಷಿ ಎಂದು ಕಾಡಾ ಅಧ್ಯಕ್ಷ ನಿಜಗುಣರಾಜು ಹೇಳಿದರು.
ಪಕ್ಷದ ತೀರ್ಮಾನಕ್ಕೆ ನಾನು ಬದ್ದವಾಗಿರುತ್ತೇನೆ, ಜನರ ಆಶೀರ್ವಾದ ಮತ್ತು ಪಕ್ಷದ ತೀರ್ಮಾನ ಎರಡೂ ಶ್ರೀರಕ್ಷೆ, ಜನರು ಅಂದುಕೊಡಂತೆ ನಾನು ಅಂದುಕೊಂಡಿದ್ದು ಈ ಬಾರಿ ಟಿಕೆಟ್ ಸಿಗುವ ನಿರೀಕ್ಷೆ ಇದೆ, ಪಕ್ಷದ ತೀರ್ಮಾನದಂತೆ ಇರುತ್ತೇನೆ ಎಂದರು.
ಈ ಹಿಂದಿನಿಂದಲೂ ನಾನು ಪ್ರಬಲ ಆಕಾಂಕ್ಷಿ, ಈ ಬಾರಿ ಪಕ್ಷ ನನ್ನ ಕೈ ಬಿಡಲ್ಲ, ಈ ಕ್ಷೇತ್ರಕ್ಕೆ ಪಕ್ಷ ಮತ್ತು ಜನರು ಹರಸುತ್ತಾರೆ ಎಂಬ ನಂಬಿಕೆ ಇದೆ, ಈ ಹಿಂದಿನಿಂದಲೂ ಜನಪರ ಕಾರ್ಯ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಈಗ ಪಕ್ಷ ಕಾಡಾ ಅಧ್ಯಕ್ಷ ಪದವಿ ನೀಡಿದ್ದು, ಮುಂದಿಯು ಸಹ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಅವಕಾಶ ನೀಡುತ್ತದೆ ಎಂಬ ವಿಶ್ವಾಸವಿದೆ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಸುಂದರ್, ಎಪಿಎಂಸಿ ಅಧ್ಯಕ್ಷ ಮನೋಜ್‍ಪಟೇಲ್, ಮುಖಂಡರಾದ ಕೂಡ್ಲ್ಲೂರು ಹನುಮಂತಶೆಟ್ಟಿ, ಚಾಮುಲ್ ನಿರ್ದೇಶಕ ಶಿವಕುಮಾರ್, ಮಾಜಿ ನಿರ್ದೇಶಕ ಕಿಲಗೆರೆ ಬಸವರಾಜು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೂರ್ಯ ಬಾಲರಾಜು ಇದ್ದಾರೆ.