ಮಾನ್ವಿ,ಜೂ.೧೫-
ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಆದರ್ಶ ವಿದ್ಯಾಲಯದ ೧೦ನೇ ತರಗತಿಯ ವಿದ್ಯಾರ್ಥಿಗಳಾದ ಐಶ್ವರ್ಯ ದೇಸಾಯಿ, ಪ್ರಗತಿ.ಎ. ತಂಡದವರು ಸಿದ್ದಪಡಿಸಿದ ಸ್ಮಾರ್ಟ ಇರಿಗೇಷನ್ ಆಟೋಮೇಷನ್ ಸಿಸ್ಟಮ್ ಪ್ರಾಜೆಕ್ಟ್ನ ಪ್ರದರ್ಶನಕ್ಕೆ ಚಾಲನೆ ನಂತರ ಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ದೇಸಾಯಿ ಮಾತನಾಡಿ ಶಾಲೆಯಲ್ಲಿನ ಎ.ಟಿ.ಎಲ್ ಲ್ಯಾಬ್ ನಲ್ಲಿ ದೊರೆಯುವ ಉಪಕರಣಗಳನ್ನು ಬಳಸಿ ಕೊಂಡು ಕೇವಲ ಒಂದು ಸಾವಿರ ವೆಚ್ಚದಲ್ಲಿ ನೀರುಣಿಸುವ ಸಾಧನವನ್ನು ಕಂಡು ಹಿಡಿಯಲಾಗಿದ್ದು, ಈ ಉಪಕರಣದಿಂದ ರೈತರು ತಮ್ಮ ಜಮೀನಿನ ಕೊಳವೆ ಬಾವಿಯಲ್ಲಿ ದೊರೆಯುವ ಅಲ್ಪ ಪ್ರಮಾಣದ ನೀರನ್ನು ಬಳಸಿಕೊಂಡು ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತದೆ ಸ್ಮಾರ್ಟ ಇರಿಗೇಷನ್ ಉಪಕರಣವನ್ನು ಕೊಳವೆ ಬಾವಿಯ ನೀರೆತ್ತುವ ಯಂತ್ರಕ್ಕೆ ಅಳವಡಿಸಿ ನಂತರ ಉಪಕರಣದಲ್ಲಿನ ಸೆನ್ಸಾರ್‌ಗಳು ಮಣ್ಣಿನಲ್ಲಿನ ತೆವಾಂಶವನ್ನು ಗ್ರಹಿಸಿ ಸ್ವಯಂಚಾಲಿತವಾಗಿ ಆರ್. ಡಿ. ನೋ ಬೋರ್ಡ ಮೂಲಕ ಕೊಳವೆ ಬಾವಿಗೆ ಅಳವಡಿಸಲಾದ ನೀರನ್ನು ಎತ್ತುವ ಯಂತ್ರಕ್ಕೆ ಸಂದೇಶ ನೀಡಿ ಸ್ವಯಂಚಾಲನೆ ಗೊಳ್ಳುವಂತೆ ಮಾಡಿ ಗಿಡ ಮರಗಳಿಗೆ ಹನಿ ನೀರಾವರಿ ಪದ್ದತಿಯಲ್ಲಿ ನೀರನ್ನು ಪೂರೈಕೆಯಾಗುವಂತೆ ನೋಡಿಕೊಳ್ಳುತ್ತದೆ ಎಂದರು.
ಮಣ್ಣಿನಲ್ಲಿ ತೇವಾಂಶ ಹೆಚ್ಚಾದಲ್ಲಿ ಕೂಡಲೆ ಕೊಳವೆ ಬಾವಿಯ ನೀರೆತ್ತುವ ಯಂತ್ರವನ್ನು ಸ್ವಯಂಚಾಲಿತವಾಗಿ ಕಾರ್ಯಸ್ಥಗಿತ ಗೊಳಿಸುವುದರಿಂದ ರೈತರಿಗೆ ವಿದ್ಯುತ್ ಉಳಿತಾಯ ಹಾಗೂ ನೀರಿನ ಉಳಿತಾಯವಾಗಿ ಕಡಿಮೆ ನೀರಿನಲ್ಲಿ ಹೆಚ್ಚು ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ ಹಾಗೂ ಸಕಾಲದಲ್ಲಿ ಗಿಡಗಳಿಗೆ ನೀರು ದೊರೆಯುವುದರಿಂದ ಉತ್ತಮ ಬೆಳವಣಿಗೆ ಹಾಗೂ ಇಳುವರಿಯಲ್ಲಿ ಹೆಚ್ಚಳವಾಗುವುದರಿಂದ ರೈತರಿಗೆ ಲಾಭವಾಗುತ್ತದೆ ಎಂದು ಮಾಹಿತಿ ನೀಡಿದರು
ಶಾಲೆಯ ಮುಖ್ಯಗುರುಗಳಾದ ದೇವಯ್ಯ ಮಾತನಾಡಿ ಸರಕಾರಿ ಆದರ್ಶ ಶಾಲೆಯಲ್ಲಿ ಮಕ್ಕಳಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದ ಕುರಿತು ಪ್ರಯೋಗಿಕವಾಗಿ ತಿಳಿಸಲು ಎ.ಟಿ.ಎಲ್.ಲ್ಯಾಬ್ ಇದ್ದು ಇಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ವೈಜ್ಞಾನಿಕ ಉಪಕರಣ ತಯಾರಿಕೆಯಲ್ಲಿ ಅಗತ್ಯವಾದ ಪೂರಕ ಮಾಹಿತಿಯನ್ನು ನೀಡಲಾಗುತ್ತಿದೆ ಶಾಲೆಯ ವಿದ್ಯಾರ್ಥಿಗಳು ಪ್ರತಿವರ್ಷ ಇಂತಹ ಹೊಸ ಉಪಕರಣಗಳನ್ನು ತಯಾರಿಸುತ್ತಾರೆ ಎಂದು ತಿಳಿಸಿದರು.
ಶಾಲೆಯಲ್ಲಿನ ಎ.ಟಿ.ಎಲ್ ಲರ್ನಿಂಗ್ ಲಿಂಕ್ ಫೌಂಡೇಶನ್ ಮತ್ತು ಡೆಲ್ ಟೆಕ್ನಾಲಜಿಯ ನವೀನ್ ಜೋಷಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದು ಕೇವಲ ಒಂದು ಸಾವಿರ ವೆಚ್ಚದಲ್ಲಿ ನೀರಾವರಿಗೆ ಅಗತ್ಯವಾದ ಉಪಕರಣವನ್ನು ಅಭಿವೃದ್ದಿ ಪಡಿಸಿದ್ದಾರೆ. ವಿದ್ಯಾರ್ಥಿಗಳು ಸಿದ್ದಪಡಿಸಿದ ಉಪಕರಣ ಎಲ್ಲರ ಗಮನ ಸೆಳೆಯುತ್ತಿದೆ.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಕಾಂತ,ರಣಜಿತ್ ಕುಮಾರ, ಸುನೀತಾ, ಪಲ್ಲವಿ, ಮಹಿಬೂಬ್, ಪರಶುರಾಮ, ಸಿದ್ದಪ್ಪ, ಶಾಂಭವಿ ಸೇರಿದಂತೆ ಶಾಲೆಯ ಶಿಕ್ಷಕರು ಭಾಗವಹಿಸಿದರು.