ನೀರಾದಿಂದ ರೈತರಿಗೆ ಆದಾಯ

ತುಮಕೂರು, ಅ. ೩೦- ಕೊಕೋನಟ್ ಜ್ಯೂಸ್ ಎಂದೇ ಪ್ರಸಿದ್ಧಿಯಾದ ತೆಂಗಿನ ನೀರಾದಿಂದ ರೈತರಿಗೆ ಹೆಚ್ಚಿನ ಆದಾಯ ಬರಲಿದ್ದು, ತೆಂಗಿನ ನೀರಾ ಇಳಿಸಿದರೆ ಪ್ರತಿ ವರ್ಷ ಒಂದು ಮರಕ್ಕೆ ೨ ಸಾವಿರ ರೂ. ತೆಂಗು ಬೆಳೆಯುವ ರೈತರಿಗೆ ಸಿಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ತೆಂಗು ಅಭಿವೃದ್ಧಿ ಮಂಡಳಿ ಮೂಲಕ ಹೆಚ್ಚಿನ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಂಸದ ಜಿ.ಎಸ್. ಬಸವರಾಜು ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎನ್‌ಐಸಿ ಕೇಂದ್ರದಲ್ಲಿ ನಡೆದ ತೆಂಗು ಅಭಿವೃದ್ಧಿ ಮಂಡಳಿಯ ಆನ್‌ಲೈನ್ ಸಭೆಯಲ್ಲಿ ಮಾತನಾಡಿದ ಅವರು, ಕೊಕೋನಟ್ ಜ್ಯೂಸ್ ವಿಚಾರದಲ್ಲಿ ಹೆಚ್ಚಿನ ಚರ್ಚೆಯಾಗಿ ಬಹುಮತದಂತೆ ಆ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರವೇ ಪರಿಚಯಿಸಿದ್ದು, ಇದು ಆಲ್ಕೋಹಾಲ್ ರಹಿತ ಶುದ್ಧ ಕೊಕೋನಟ್ ಜ್ಯೂಸ್ ಆಗಿರುವ ಹಿನ್ನೆಲೆಯಲ್ಲಿ ತೆಂಗಿನ ನೀರಾ ತಯಾರು ಮಾಡಿದರೆ ತೆಂಗು ಬೆಳೆಗಾರರಿಗೆ ಒಂದು ಮರಕ್ಕೆ ವರ್ಷಕ್ಕೆ ೨ ಸಾವಿರ ರೂ. ಆದಾಯ ಬರುವಂತೆ ಮಾಡಲು ತೆಂಗು ಬೆಳೆಯುವ ರಾಜ್ಯಗಳಲ್ಲಿ ಆಯಾ ಸರ್ಕಾರಗಳು ಪ್ರೋತ್ಸಾಹ ಕೊಟ್ಟು ಹೆಚ್ಚು ಹೆಚ್ಚು ಕಾರ್ಯಕ್ರಮ ರೂಪಿಸಿ ಅನುಮೋದನೆ ಪಡೆಯಬೇಕು ಎಂದು ಸೂಚಿಸಿದರು.
ತೆಂಗು ಉತ್ಪನ್ನಗಳಿಗೆ ಪ್ರಸಿದ್ಧಿ ಪಡೆದಿರುವ ಕೇರಳ ಮತ್ತು ತಮಿಳುನಾಡಿಗೆ ಹೆಚ್ಚಿಗೆ ಹಣ ಹೋಗುವುದನ್ನು ಕಡಿತಗೊಳಿಸಿ, ನಮ್ಮ ರಾಜ್ಯಕ್ಕೂ ಸಮಭಾಗವಾಗಿ ಹಣವನ್ನು ಖರ್ಚು ಮಾಡುವ ನಿಟ್ಟಿನಲ್ಲಿ ಕಾರ್ಯಸೂಚಿ ಸಿದ್ಧಪಡಿಸಿ ತೆಂಗು ಸಂಶೋಧನಾ ಕೇಂದ್ರ ಮತ್ತು ತೆಂಗಿನ ಉತ್ಪನ್ನಗಳ ವಿತರಣೆ ಸಕ್ರಿಯಗೊಳಿಸುವಿಕೆ, ಹೆಚ್ಚಿನ ರೀತಿಯಲ್ಲಿ ತೆಂಗಿನ ಗಾರ್ಡ್‌ನ್‌ಗಳ ವಿಸ್ತರಣೆ ಸೇರಿದಂತೆ ಸುಮಾರು ೧೩ ಕಾರ್ಯಸೂಚಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು.
ಕರ್ನಾಟಕ, ಕೇರಳ ಗೋವಾ, ತಮಿಳುನಾಡು, ಲಕ್ಷದ್ವೀಪ, ಒರಿಸ್ಸಾ, ಗುಜರಾತ್ ಸೇರಿದಂತೆ ತೆಂಗಿನ ಗಿಡ ಬೆಳೆಯುವಂತಹ ಇತರೆ ರಾಜ್ಯಗಳು ಪೂರ್ಣವಾಗಿ ಸಹಕಾರ ನೀಡಿದರೆ ತೆಂಗು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ಹೇಳಿದರು.
ತೆಂಗಿನ ಗಿಡಕ್ಕೆ ಬರುವ ನುಸಿಪೀಡೆ ಸೇರಿದಂತೆ ವಿವಿಧ ರೋಗ ರುಜಿನಗಳು ಬರದಂತೆ ತಡೆಗಟ್ಟಲು ಅಗತ್ಯ ಕ್ರಮದ ಜತೆಗೆ ಹೆಚ್ಚಿನ ಇಳುವರಿ ಬರುವಂತಹ ಕರ್ನಾಟಕದ ತಿಪಟೂರಿನ ಸಸಿಗೆ ಹೆಚ್ಚಿನ ಆದ್ಯತೆ ಕೊಟ್ಟು ವಿಶಾಲವಾದ ಪ್ರದೇಶದಲ್ಲಿ ಬೆಳೆಯುವುದಕ್ಕೆ ಆದ್ಯತೆ ಕೊಡಬೇಕು ಎಂದರು.
ಬೆಂಗಳೂರು ಪ್ರಾದೇಶಿಕ ಕಚೇರಿಯ ತೋಟಗಾರಿಕಾ ಉಪನಿರ್ದೇಶಕ ಹೇಮಚಂದ್ರ ಅವರ ಮೇಲೆ ವಿನಾ ಕಾರಣ ಕೆಲವು ಅಧಿಕಾರಿಗಳು ಆರೋಪ ಹೊರಿಸಿ ಲೋಪದೋಷ ನಡೆದಿದೆ ಎಂದು ಆ ಅಧಿಕಾರಿಯನ್ನು ಅಮಾನತ್ತು ಮಾಡಿ, ಆ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐನವರು ತನಿಖೆ ನಡೆಸಿ ಆರೋಪಗಳಲ್ಲಿ ಹುರುಳಿಲ್ಲ ಎಂದು ವರದಿ ನೀಡಿ ದೋಷಮುಕ್ತರನ್ನಾಗಿಸಿದೆ. ದೋಷಮುಕ್ತಗೊಂಡ ಹೇಮಚಂದ್ರ ಅವರನ್ನು ಮತ್ತೆ ಬೆಂಗಳೂರಿನಲ್ಲೇ ನೇಮಿಸಬೇಕೆಂದು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಕಮಿಟಿ ಒಪ್ಪಿದ್ದು, ಹೇಮಚಂದ್ರ ಅವರನ್ನು ಮತ್ತೆ ಆ ಜಾಗಕ್ಕೆ ನೇಮಿಸಲು ಮುಂದಿನ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೇಳಿದರು. ಸಭೆಯಲ್ಲಿ ಎಸ್.ಶಿವಪ್ರಸಾದ್ ಭಾಗವಹಿಸಿದ್ದರು.