ನೀರಮಾನ್ವಿ ಗ್ರಾಮಕ್ಕೆ ನುಗ್ಗಿ ಮೇಕೆಯನ್ನು ಹೊತ್ತೂಯ್ದ ಚಿರತೆ : ಜನರಲ್ಲಿ ಆತಂಕ

ಚಿರತೆ ಪ್ರತ್ಯಕ್ಷ ಪ್ರಕರಣ : ಒಮ್ಮೆಯೂ ಭೇಟಿ ನೀಡದ ಶಾಸಕ ವಿರುದ್ದ ಜನಾಕ್ರೋಶ
ಮಾನ್ವಿ,ಜು.೨೪- ಕಳೆದ ಆರೇಳು ತಿಂಗಳುಗಳಿಂದ ತಾಲೂಕಿನ ನೀರಮಾನ್ವಿ, ಬೆಟ್ಟದೂರು ಗ್ರಾಮಗಳಲ್ಲಿನ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಈ ಚಿರತೆಯನ್ನು ಸೆರೆ ಹಿಡಿಯಲು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ರಾಜೇಶನಾಯಕ ನೇತೃತ್ವದ ಅರಣ್ಯ ಸಿಬ್ಬಂದಿ ಹಾಗೂ ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಛಾಯಾಗ್ರಾಹಕ ಜಗನ್ನಾಥ ಚೌದ್ರಿ, ಪತ್ರಕರ್ತ ಶರಣಬಸವ ನೀರಮಾನ್ವಿ ಸೇರಿದಂತೆ ಅನೇಕ ಗ್ರಾಮಸ್ಥರ ಸಕಲ ಪ್ರಯತ್ನ ವಿಫಲವಾಗಿರುವ ಬೆನ್ನ ಹಿಂದೆಯೇ ಶನಿವಾರ ಮಧ್ಯಾನ್ಹ ೧.೩೦ಕ್ಕೆ ನೀರಮಾನ್ವಿ ಗ್ರಾಮದೊಳಗೆ ಪ್ರವೇಶಿಸಿ ಸಿದ್ದರೂಢಮಠದ ಹತ್ತಿರದ ಕೆನಾಲ್ ರೋಡ್ ಬಳಿ ಬಂದ ಚಿರತೆ ರಮೇಶ ಎನ್ನುವರರಿಗೆ ಸೇರಿದ ಮೇಕೆಯನ್ನು ಹೊತ್ತೂಯ್ದಿದ್ದು ಈ ದೃಶ್ಯವನ್ನು ಕಣ್ಣಾರೆ ಕಂಡ ಜನರು ತುಂಬಾ ಭಯಭೀತಿಗೊಂಡಿದ್ದಾರೆ.
ನೀರಮಾನ್ವಿ, ಬೆಟ್ಟದೂರು ಗುಡ್ಡದಲ್ಲಿ ಬೀಡುಬಿಟ್ಟಿರುವ ಚಿರತೆ ಅನೇಕ ರೀತಿಯ ಭಯದ ವಾತಾವರಣ ಮೂಡಿಸಿದ್ದರು ಕೂಡಾ ಇದುವರೆಗೆ ಶಾಸಕ ರಾಜಾವೆಂಕಟಪ್ಪನಾಯಕ ಒಮ್ಮೆಯೂ ಈ ಸ್ಥಳಕ್ಕೆ ಭೇಟಿ ನೀಡದೆ ಭಾರಿ ನಿರ್ಲಕ್ಷ್ಯವಹಿಸಿದ್ದಾರೆ. ಚಿರತೆ ಇರುವಿಕೆ ಬಗ್ಗೆ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದರು ಕೂಡಾ ಶಾಸಕರು ಇದ್ಯಾವುದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಇಲ್ಲಿನ ಆಮಾಯಕ ಜನರ ಪ್ರಾಣಹಾನಿ ಆದ ನಂತರ ಭೇಟಿ ನೀಡುವುರೇ ಎಂದು ಶಾಸಕರ ವಿರುದ್ಧ ಜನರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೀರಮಾನ್ವಿಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಮಾಜಿಶಾಸಕ ಹಂಪಯ್ಯನಾಯಕ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಮತ್ತು ಗ್ರಾಮಸ್ಥರು ಭಯಪಡದಂತೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದರು. ಆದರೆ ಕ್ಷೇತ್ರದ ಶಾಸಕ ರಾಜಾವೆಂಕಟಪ್ಪನಾಯಕ ಭೇಟಿ ನೀಡದೆ ಇರುವುದ ಗಮನಿಸಿದರೆ ಇವರಲ್ಲಿನ ಜನಪರ ಕಾಳಜಿ ಎಷ್ಟೆಂದು ಕಂಡುಬರುತ್ತದೆ.
ನೀರಮಾನ್ವಿ, ಬೆಟ್ಟದೂರು ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷವಾದಾಗನಿಂದ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ರಾಜೇಶನಾಯಕ ಮತ್ತವರ ಸಿಬ್ಬಂದಿಗಳ ತಂಡವು ನಿರಂತರ ಪ್ರಯತ್ನ ನಡೆಸಿದರು ಸಾಧ್ಯವಾಗಿಲ್ಲ. ಚಿರತೆ ಸೆರೆಗೆ ಗುಡ್ಡ ಮತ್ತು ಕೆರೆ ಭಾಗಗಳಲ್ಲಿ ಬೋನ್ ಆಳವಡಿಕೆ ಸೇರಿದಂತೆ ಇನ್ನಿತರ ತಂತ್ರಗಳನ್ನು ಹೆಣೆದರು ಚಾಣಾಕ್ಷ ಚಿರತೆ ಬಲೆಗೆ ಬಿದ್ದಿಲ್ಲ.
ಕಳೆದ ೧೫ ದಿನಗಳಿಂದ ಚಿರತೆ ತನ್ನ ಮರಿಗಳೂಂದಿಗೆ ನೀರಮಾನ್ವಿ, ಬೆಟ್ಟದೂರು ಹೊಲಗದ್ದೆಗಳಲ್ಲಿ ಸಂಚರಿಸುತ್ತಿದ್ದು ಜನರು ಮತ್ತಷ್ಟು ಭಯಭೀತರಾಗಿದ್ದರು. ಈ ಭಾಗದ ಜನರ ಪ್ರಾಣಹಾನಿ ಅಗದಂತೆ ತಡೆದು ಚಿರತೆ ಸೆರೆಗೆ ಬಲೆ ಬೀಸಲು ಡಿಎಫ್‌ಒ ಚಂದ್ರಣ್ಣ, ಆರ್‌ಎಫ್‌ಒ ರಾಜೇಶನಾಯಕರವರು ವನ್ಯಜೀವಿ, ಜೀವಶಾಸ್ತ್ರ ತಜ್ಞರು ಮತ್ತು ಪಕ್ಷಿಪ್ರೇಮಿ ಸಲ್ಲಾವುದ್ದೀನ್, ಛಾಯಾಗ್ರಾಹಕ ಜಗನ್ನಾಥ ಚೌದ್ರಿ ಸೇರಿದಂತೆ ಸಿಬ್ಬಂದಿ ವರ್ಗವದರು ನಡೆಸಿರುವ ಕಾರ್ಯಾಚರಣೆ ಫಲಪ್ರದವಾಗಿಲ್ಲ ಎನ್ನಬಹುದು.
ಶನಿವಾರದಂದು ಮಧ್ಯಾಹ್ನ ಗುಡ್ಡದಿಂದ ಕೆಳಗಿಳಿದು ನೀರಮಾನ್ವಿ ಗ್ರಾಮದೊಳಗೆ ಆಗಮಿಸಿದ ಚಿರತೆಯು ಮೇಕೆಯನ್ನು ಎಳೆದೂಯ್ದಿರುವುದು ಗಂಭೀರ ವಿಷಯವೇ ಸರಿ. ಈ ವೇಳೆ ಅಲ್ಲಿಯೇ ಇದ್ದ ಜನರು ಚಿರತೆ ಭೇಟೆಗೆ ಬಡಿಗೆ ಬೆತ್ತಗಳನ್ನು ಹಿಡಿದು ಗುಡ್ಡದ ಮೇಲೇರಿದ್ದಾರೆ. ಅಷ್ಟೋತ್ತಿಗಾಗಲೇ ಚಿರತೆಯು ಮೇಕೆಯನ್ನು ಕೊಂದು ತಿಂದಿದೆ. ಗುಡ್ಡದ ಮೇಲೆ ಚಿರತೆ ತಿಂದು ಬಿಟ್ಟಿರುವ ಮೇಕೆಯ ಕಾಲು, ಮೊಳೆಗಳು ಬಿದ್ದಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ.
ಈಗಲಾದರೂ ಶಾಸಕ ರಾಜಾವೆಂಕಟಪ್ಪ ನಾಯಕ ಎಚ್ಚೆತ್ತುಕೊಂಡು ಜನರ ಪ್ರಾಣಹಾನಿ ಸಂಭವಿಸುವ ಮುಂಚೆಯೇ ಚಿರತೆಯನ್ನು ಸೆರೆ ಹಿಡಿಯಲು ಸರ್ಕಾರದೊಂದಿಗೆ ಸಂಪರ್ಕಿಸಿ ತಜ್ಞರನ್ನು ಕರೆಯಿಸಿ ಚಿರತೆ ಸೆರೆ ಹಿಡಿದು ಜನರಲ್ಲಿನ ಆತಂಕವನ್ನು ದೂರ ಮಾಡುವುರೇ ಎಂದು ಕಾದುನೋಡಬೇಕಿದೆ.