ನೀರಮಾನ್ವಿಯಲ್ಲಿ ಪ್ರಾಚ್ಯಾವಿಶೇಷಗಳ ಶೋಧ


ಈ ಗ್ರಾಮವು ತಾಲೂಕು ಕೇಂದ್ರವಾದ ಮಾನ್ವಿ ಪಟ್ಟಣದಿಂದ ಉತ್ತರದಿಕ್ಕಿಗೆ ಕೂಗಳತೆದೂರದಲ್ಲಿದೆ.ಇಲ್ಲಿನ ಪ್ರಾಚ್ಯಾವಶೇಷಗಳನ್ನು ಇತಿಹಾಸ ಉಪನ್ಯಾಸಕ ಹಾಗೂ ಸಂಶೋಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿಯವರು ಹಲವು ವರ್ಷಗಳಿಂದ ಗಮನಿಸಿಕೊಂಡು ಬಂದಿದ್ದರೂ ಅವುಗಳನ್ನು ಪತ್ರಿಕೆಗಳ ಮೂಲಕ ಪ್ರಕಟಿಸಿರಲಿಲ್ಲ.ನೀರಮಾನ್ವಿ ಗ್ರಾಮವು ಶಕ್ತಿದೇವತೆಯಾದ ರೇಣುಕಾಎಲ್ಲಮ್ಮ ದೇವಿಯ ಪ್ರಸಿದ್ದ ಕ್ಷೇತ್ರವಾಗಿದ್ದು,ಹಲವು ಸ್ಥಳಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ತಮ್ಮ ಇಷ್ಠಾರ್ಥಸಿದ್ದಿಗಳನ್ನು ಪೂರೈಸಿಕೊಳ್ಳುವವರಾಗಿದ್ದಾರೆ.
ಈ ದೇವಿಯೊಂದಿಗೆ ಗ್ರಾಮದಲ್ಲಿ ಮೂರು ಮಾರುತಿ ದೇವಾಲಯಗಳು,ಮಾರಮ್ಮ,ಮಲ್ಲಯ್ಯ ಮೊದಲಾದ ದೇವಾಲಯಗಳಿವೆ. ಗ್ರಾಮದ ಪೂರ್ವದಿಕ್ಕಿಗೆ ನವಶಿಲಾಯುಗ ಕಾಲದ ಬೂದಿಮಣ್ಣು (ಹಾಳುಮಣ್ಣು) ಮತ್ತು ಮಡಕೆಯ ಚೂರುಗಳು ಕಾಣಬರುತ್ತವೆ.
ಇಲ್ಲಿನ ದಕ್ಷಿಣ ದಿಕ್ಕಿನ ಕರೆಗುಡ್ಡದಲ್ಲಿ ನವಶಿಲಾಯುಗ ಮತ್ತು ಬೃಹತ್ ಶಿಲಾಯುಗ ಕಾಲಕ್ಕೆ ಸೇರಿದ ಅನೇಕ ಗೂಳಿಗಳು,ಸಾರಂಗ,ಆನೆ,ಹುಲಿ,ಜಿಂಕೆ,ನವಿಲು,ಬಾಣದ ಮೊನಚು,ಕುಳಿಗಳು,ಹಲಗುಗಳು ಮತ್ತು ಮಾನವರ ಕುಟ್ಟಿದ ಚಿತ್ರಗಳನ್ನು ಪುರಾತನ ಮಾನವರು ಇಲ್ಲಿನ ಗವಿಗಳಲ್ಲಿ ವಾಸಮಾಡಿ ತಾವು ಕಂಡುಕೊಂಡವುಗಳನ್ನು ಮನಸಾರೆ ಕುಟ್ಟಿ ಕುಟ್ಟಿ ಚಿತ್ರಿಸಿದ್ದಾರೆ. ಹಾಗೆಯೇ ಚಾರಿತ್ರಿಕ ಕಾಲಕ್ಕೆ ಸೇರಿದ ಈಶ್ವರಲಿಂಗ,ನಾಗರಹಾವು,ಆಂಜನೇಯ ರಥ, ನೃತ್ಯಬಂಗಿಯ ಮತ್ತು ಪ್ರಾಣಿಗಳ ಬೇಟೆಯಲ್ಲಿ ತೊಡಗಿಸಿಕೊಂಡಿರುವ ಮಾನವರ ಚಿತ್ರಗಳು, ಬಂಡಿಯನ್ನು (ಚಕ್ಕಡಿ) ಎಳೆಯುತ್ತಿರುವ ಜೋಡೆತ್ತುಗಳ ಕುಟ್ಟಿದ ಚಿತ್ರಗಳಿವೆ. ಇವುಗಳೊಂದಿಗೆ ಗ್ರಾಮದ ಈಶಾನ್ಯ ದಿಕ್ಕಿನ ಹನುಮಪ್ಪನ ಗುಡ್ಡದಲ್ಲಿ ಒಳಕಲ್ಲುಗಳು, ಪಾದಗಳು, ಮಾರುತಿ ದೇವರು, ಈಶ್ವರಲಿಂಗ, ನಂದಿ ಮತ್ತು ನಾಗಶಿಲ್ಪಗಳು, ಚಕ್ಕರಾಟದಮನೆ, ಪುಷ್ಪದಳ ಹಾಗೂ ಗ್ರಾಮದ ಆಸೀರ್‌ಖಾನ್ ಮಸೀದಿಯ ಮುಂಭಾಗದಲ್ಲಿ ಹುಲಿ ಶಿಲ್ಪ ಮೊದಲಾದವುಗಳಿವೆ. ಇವೆಲ್ಲವುಗಳೊಂದಿಗೆ ಗ್ರಾಮದ ತಿಮ್ಮಪ್ಪನ ಕಟ್ಟೆ, ಎರಡು ಮಾರುತಿ ದೇವಾಲಯಗಳು,ಊರಿನ ಪೂರ್ವದಿಕ್ಕಿನ (ಮಲ್ಲದೇವರ ಗುಡ್ಡದ ದಾರಿಯಲ್ಲಿ) ಪರಿಸರದಲ್ಲಿ ವೀರಗಲ್ಲುಗಳು, ವೀರಮಹಾಸತಿ ಶಿಲ್ಪಗಳು ಮತ್ತು ರಾಮಣ್ಣ ಹರಿಜನ (ಮುಂದಿನ)ರವರ ಮನೆಯ ಹಿಂಬದಿಯಲ್ಲಿ ಮೂರು ವೀರಗಲ್ಲುಗಳಿವೆ. ನೀರಮಾನ್ವಿ ಗ್ರಾಮದಲ್ಲಿ ಒಟ್ಟು ಹನ್ನೊಂದು ವೀರಗಲ್ಲುಗಳು, ಐದು ವೀರ ಮಹಾಸತಿ ಶಿಲ್ಪಗಳು ಕಾಣಬರುತ್ತವೆ. ಇವುಗಳಲ್ಲಿ ಊರೊಳಗಿನ ಮಾರತಿ ದೇವಾಲಯದಲ್ಲಿರುವ ವೀರಮಹಾಸತಿ ಶಿಲ್ಪವು ಕಪ್ಪುಶಿಲೆಯಲ್ಲಿದ್ದು ಕ್ರಿ.ಶ. ೧೭-೧೮ನೇ ಶತಮಾನಕ್ಕೆ ಸೇರುತ್ತಿದ್ದು, ಸುಂದರ ಮತ್ತು ವಿಶಿಷ್ಟ ಶಿಲ್ಪವಾಗಿದೆ. ಈ ಚಪ್ಪಡಿಕಲ್ಲಿನಲ್ಲಿ ವೀರನು ನಿಂತ ಭಂಗಿಯಲ್ಲಿದ್ದು, ಬಲಗೈಯಲ್ಲಿ ಚಾಕು,ಎಡಗೈಯಲ್ಲಿ ಭರ್ಚಿಹಿಡಿದಿದ್ದಾನೆ. ಬಹುಶ: ಈತನು ತನ್ನೆರಡು ಬೇಟೆನಾಯಿಗಳೊಂದಿಗೆ ಕಾಡಿಗೆ ಹೋಗಿ ಅಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಲು ನಾಯಿಗಳನ್ನು ಚೂ(ಆಕ್ರಮಣ, ದಾಳಿಮಾಡಲು) ಬಿಟ್ಟಿದ್ದಾನೆ.
ಒಂದುನಾಯಿ ಕೃಷ್ಣಮೃಗವನ್ನು ಬೆನ್ನಟ್ಟಿ ನಾಗಲೋಟದಲ್ಲಿ ಓಡುತ್ತಿದೆ.ಇನ್ನೊಂದು ನಾಯಿ ಈತನ ಜೊತೆಯಲ್ಲಿದೆ.
ಈ ಸಮಯದಲ್ಲಿ ವೀರನು ಯಾವುದೋ ಕಾರಣದಿಂದ ಮೃತಪಟ್ಟಿರಬೇಕೆನಿಸುತ್ತದೆ. ಇದರಿಂದ ಅಂದಿನ ದಿನಮಾನಗಳಲ್ಲಿ ಗಂಡ ಸತ್ತು ಹೋದರೆ ಮಡದಿಯಾದವಳು ಮಹಾಸತಿಯಾಗುವ ಸನ್ನಿವೇಶದ ಮಹಿಳೆಯು ವೀರನ ಬಲಬದಿಯಲ್ಲಿ ನಿಂತಿದ್ದಾಳೆ. ಈಕೆ ತನ್ನ ಬಲಗೈಯ್ಯಲ್ಲಿ ತೀರ್ಥದ ತಂಬಿಗೆ ಹಾಗು ಎಡಗೈಯಲ್ಲಿ ಕಿರುಗತ್ತಿಯಿದೆ.
ಮಹಿಳೆ ಚಿತೆ ಏರುವ ಪೂರ್ವದಲ್ಲಿ ತಾನು ಹಿಡಿದುಕೊಂಡ ಕಿರುಗತ್ತಿಯಿಂದ ದೇಹಕ್ಕೆ ಚುಚ್ಚಿಕೊಂಡು ಆತ್ಮಹತ್ಯೆಮಾಡಿಕೊಳ್ಳುವ ಸನ್ನಿವೇಶದ ಶಿಲ್ಪವಾಗಿದೆ. ನೀರಮಾನ್ವಿ ಗ್ರಾಮದ ಅವಶೇಷಗಳನ್ನು ಶೋಧಿಸುವಲ್ಲಿ ಗ್ರಾಮದ ನರಸಪ್ಪ ಇತಿಹಾಸ ಉಪನ್ಯಾಸಕ,ವೆಂಕಟೇಶ ಮಿಟ್ಟೆಕ್ಯಾಂಪ್,ವೆಂಕಟೇಶನಾಯಕ,ಅಶೋಕನಾಯಕ ದಿದ್ದಿಗಿ, ಚಾಮರಾಜ, ಅನಿಲ ಮತ್ತು ಡ್ರೈವರ್ ನರಸಿಂಹ (ಗುಂಡಾ) ರವರು ನೆರವಾಗಿದ್ದರೆಂದು ಸಂಶೋಧಕರು ತಿಳಿಸಿದ್ದಾರೆ.