ನೀರಜ್‌ಗೆ ಮತ್ತೆ ಚಿನ್ನದ ಪದಕ

ಕುರ್ಟಾನಾ, ಜೂ.೧೯- ಫಿನ್ ಲ್ಯಾಂಡ್ ನ ಕುರ್ಟಾನಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಭಾರತದ ಜಾವೆಲಿನ್ ಪಟು ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿ ೮೬.೬೯ ಮೀಟರ್ ಎಸೆದು ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಮತ್ತೆ ಇತಿಹಾಸ ಬರೆದಿದ್ದಾರೆ.
ನಿನ್ನೆ ಫಿನ್‌ಲ್ಯಾಂಡ್‌ನಲ್ಲಿ ನಡೆದ ಕುರ್ಟಾನೆ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಟ್ರಿನಿಡಾಡ್ ಮತ್ತು ಟೊಬಾಗೋದ ಕೆಶೋರ್ನ್ ವಾಲ್ಕಾಟ್ ಹಾಗೂ ಗ್ರೆನಡಾದ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್‌ಗಿಂತ ಮೊದಲು ಗುರಿ ತಲುಪಿದರು.
ಇತ್ತೀಚೆಗೆ ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ ನೀರಜ್ ಚೋಪ್ರಾ ಅವರು ತಮ್ಮ ೮೬.೬೯ ಮೀ. ಎಸೆತದೊಂದಿಗೆ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು. ಇನ್ನೂ, ಟೋಕಿಯೊ ಒಲಿಂಪಿಕ್ಸ್ ಬಳಿಕ ಇದು ನೀರಜ್ ಚೋಪ್ರಾರ ಎರಡನೇ ಸ್ಪರ್ಧೆಯಾಗಿದ್ದು, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು.
ಅದೇ ರೀತಿ, ಮತ್ತೋರ್ವ ಪಟು ಕೆಶೋರ್ನ್ ವಾಲ್ಕಾಟ್ ೮೬.೬೪ ಮೀ. ಎಸೆದು ಎರಡನೇ ಸ್ಥಾನ ಪಡೆದರೆ, ಆಂಡರ್ಸನ್ ಪೀಟರ್ಸ್ ೮೪.೭೫ರ ಅತ್ಯುತ್ತಮ ಪ್ರಯತ್ನದೊಂದಿಗೆ ಮೂರನೇ ಸ್ಥಾನ ಪಡೆದರು.
ಅಷ್ಟೇ ಅಲ್ಲದೆ, ಈ ವಾರದ ಆರಂಭದಲ್ಲಿ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕವನ್ನು ಗೆದ್ದಿದ್ದರು. ಅಲ್ಲಿ ಅವರು ೮೯.೩೦ ಮೀ ಎಸೆಯುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದರು.ನೀರಜ್ ಚೋಪ್ರಾ ಮುಂದಿನ ಜೂನ್ ೩೦ ರಂದು ಡೈಮಂಡ್ ಲೀಗ್ ನ ಸ್ಟಾಕ್ ಹೋಮ್ ಲೆಗ್ ನಲ್ಲಿ ಭಾಗವಹಿಸಲಿದ್ದಾರೆ.