ನೀತಿ ಸಂಹಿತೆ ಸಡಿಲಿಕೆ ಕೋರಿ ಆಯೋಗಕ್ಕೆ ಪತ್ರ ಬರೆಯಲು ಚಿಂತನೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಮೇ೮:ರಾಜ್ಯದಲ್ಲಿ ಲೋಕಸಭಾ ಚುನಾವಣೆ ೨ನೇ ಹಂತದ ಮತದಾನ ಮುಗಿಯುತ್ತಿದ್ದಂತೆಯೇ ಚುನಾವಣಾ ನೀತಿ ಸಂಹಿತೆಯನ್ನು ಸಡಿಲಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ರಾಜ್ಯಸರ್ಕಾರ ಮುಂದಾಗಿದೆ.
ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸುತ್ತಿದ್ದಂತೆಯೇ ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲೂ ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಹೊಸ ಕಾರ್ಯಕ್ರಮಗಳನ್ನು ಕೈಗೊಳ್ಳಲು ನೀತಿ ಸಂಹಿತೆಯಡಿ ಅವಕಾಶವಿರಲಿಲ್ಲ.
ಈ ನೀತಿ ಸಂಹಿತೆ ಮತ ಎಣಿಕೆ ನಡೆಯುವ ಜೂ. ೪ರವರೆಗೂ ಜಾರಿಯಲ್ಲಿರಲಿದೆ. ರಾಜ್ಯದಲ್ಲಿ ಎಲ್ಲ ೨೮ ಕ್ಷೇತ್ರಗಳಲ್ಲೂ, ಲೋಕಸಭಾ ಕ್ಷೇತ್ರಗಳಲ್ಲೂ ಮತದಾನ ಪೂರ್ಣಗೊಂಡಿರುವುದರಿಂದ ನೀತಿ ಸಂಹಿತೆಯನ್ನು ಸಡಿಲ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲು ರಾಜ್ಯಸರ್ಕಾರ ನಿರ್ಧರಿಸಿದ್ದು, ಅದರಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲು ಮುಂದಾಗಿದೆ.
ರಾಜ್ಯದಲ್ಲಿ ಮತದಾನ ಮುಗಿದಿರುವುದರಿಂದ ಸರ್ಕಾರದ ಮಟ್ಟದಲ್ಲಿ ಹೊಸ ಕಾರ್ಯಕ್ರಮಗಳ ಜಾರಿ, ಅಭಿವೃದ್ಧಿ ಕೆಲಸಗಳತ್ತ ಚಿತ್ತ ಹರಿಸುವುದು, ಮತದಾರರ ಮೇಲೆ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಹಾಗಾಗಿ ಚುನಾವಣಾ ನೀತಿ ಸಂಹಿತೆಯನ್ನು ಸಡಿಲ ಮಾಡುವಂತೆ ಪತ್ರ ಬರೆಯಲು ಸರ್ಕಾರ ತಯಾರಿ ನಡೆಸಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಬರ ನಿರ್ವಹಣೆಗೂ ಗಮನ ನೀಡಬೇಕಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ನೀತಿ ಸಂಹಿತೆಯನ್ನು ಸಡಿಲ ಮಾಡುವಂತೆ ರಾಜ್ಯಸರ್ಕಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಲಿದೆ ಎಂದು ಹೇಳಲಾಗಿದೆ.