ನೀತಿ ಸಂಹಿತೆ ಪಾಲನೆಗೆ ಸೂಚನೆ

ಕೆ.ಆರ್. ಪುರ,ಏ.೨- ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದು ಧಾರ್ಮಿಕ ಸಂಘ ಸಂಸ್ಥೆಗಳ ಹಾಗೂ ಮದ್ಯದಂಗಡಿ ಮಾಲೀಕರನ್ನು ಕರೆದು ನೀತಿ ಸಂಹಿತೆ ಕುರಿತು ಮಾಹಿತಿ ನೀಡಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಎಮ್ ಸಿ ಸಿ ಉಲ್ಲಂಘನೆ ನಡೆಯದಂತೆ ಎಚ್ಚರಿಕೆ ನೀಡಲಾಗಿದೆ ಎಂದು ೧೭೪-ಮಹದೇವಪುರ ಮೀಸಲು ಕ್ಷೇತ್ರದ ಚುನಾವಣಾಧಿಕಾರಿ ಜೆ. ಮಹೇಶ್ ತಿಳಿಸಿದ್ದಾರೆ.
ಕ್ಷೇತ್ರದ ಬಿಇಓ ಕಚೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಆರಂಭವಾಗಿರುವ ಮಹದೇವಪುರ ಮೀಸಲು ಕ್ಷೇತ್ರದ ಚುನಾವಣಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು,ಚುನಾವಣೆ ನಿಷ್ಪಕ್ಷಪಾತವಾಗಿ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಅಕ್ರಮ ಚುನಾವಣೆಗೆ ಕಡಿವಾಣ ಹಾಕಲು ಮಹದೇವಪುರ ಕ್ಷೇತ್ರದಲ್ಲಿ ಏಳು ಕಡೆ ಸಿಸಿಟಿವಿ ಒಳಗೊಂಡ ಏಳು ಕಡೆ ಚೆಕ್ ಪೋಸ್ಟ್ ಸ್ಥಾಪನೆ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದರು. ಜೊತೆಗೆ ಚುನಾವಣಾ ಅಧಿಕಾರಿಗಳು ಸಂಶಯಾಸ್ಪದ ವಾಹನಗಳು ತಪಾಸಣೆ ನಡೆಸಲಾಗುತ್ತಿದ್ದು, ಅನುಮಾನಸ್ಪದ ವ್ಯಕ್ತಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದರು.
ಚುನಾವಣಾ ಅಧಿಕಾರಿಗಳ ಅನುಮತಿ ಪಡೆಯದೆ ಪಕ್ಷದ ಚಿನ್ಹೆ ಇರುವ ವಾಹನಗಳನ್ನು ಬಳಸುವಂತಿಲ್ಲ ಎಂದರು. ರಾಜಕೀಯ ಮುಖಂಡರು ಅನುಮತಿ ಇಲ್ಲದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ ಎಂದರು.
ಕ್ಷೇತ್ರದಲ್ಲಿ ೪೮೦ ಮತಕೇಂದ್ರಗಳಿದ್ದು ೨೭ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮತಗಟ್ಟೆಗಳನ್ನು ಈಗಾಗಲೇ ಪರಿಶೀಲನೆ ಮಾಡಿದ್ದಾರೆ. ಮೀಸಲು ಕ್ಷೇತ್ರದಲ್ಲಿ ಒಟ್ಟು ೫,೮೬,೪೭೬ ಮತದಾರರು ಇದ್ದಾರೆ. ಅದರಲ್ಲಿ ಮಹಿಳಾ ಮತದಾರರು ೨,೭೦,೨೮೯ ಪುರುಷ ಮತದಾರರು ೩,೧೫,೯೬೬ ಮತದಾರರು ಪಿಡಬ್ಲ್ಯೂಡಿ ಮತದಾರರು ೨೨೧೨ ಹಾಗೂ ೮೦ ವರ್ಷ ಮೇಲ್ಪಟ್ಟ ಮತದಾರರು ಸಂಖ್ಯೆ ೨೭೫೩ ಮತ್ತು ಸೇವಾ ಮತದಾರರು ೯೭ ಮತದಾರರು ಹೊಂದಿದ್ದಾರೆ ಎಂದು ತಿಳಿಸಿದರು.
ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಪೋಸ್ಟ್ ಮೂಲಕ ಮತದಾನ ಮಾಡುವ ಪ್ರಕ್ರಿಯೆ ಇದೆ. ಇದಕ್ಕೆ ಅರ್ಜಿಯನ್ನು ಸಲ್ಲಿಸಿದಲ್ಲಿ ಮತದಾನ ಅವಕಾಶವನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಅಜೀತ್ ಕುಮಾರ್ ರೈ ಇದ್ದರು.