ನೀತಿ ಸಂಹಿತೆ ಉಲ್ಲಂಘಿಸಿ ಸಭೆ ರೇಣು ವಿರುದ್ಧ ಕೇಸ್

ಬೆಂಗಳೂರು,ಏ.೭-ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕ ಸಭೆ ನಡೆಸಿದ ಆರೋಪದಡಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ರೇಣುಕಾಚಾರ್ಯ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀತಿಸಂಹಿತೆ ಉಲ್ಲಂಘನೆ ಮಾಡಿ ಸಭೆ ನಡೆಸುತ್ತಿದ್ದಾಗ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ನೀಡಿದ ದೂರಿನನ್ವಯ ಶಾಸಕ ರೇಣುಕಾಚಾರ್ಯ ಹಾಗೂ ಸಭೆಯ ಆಯೋಜಕ ಸಂತೋಷ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕಳೆದ ಏಪ್ರಿಲ್ ೨ರಂದು ಮಧ್ಯಾಹ್ನ ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿದ್ದ ಶಾಸಕ ರೇಣುಕಾಚಾರ್ಯ, ಕಾರ್ಯಕರ್ತರು ಹಾಗೂ ನಗರದಲ್ಲಿ ನೆಲೆಸಿರುವ ತಮ್ಮ ಕ್ಷೇತ್ರದ ಜನರನ್ನ ಸೇರಿಸಿ ಮಾತನಾಡುತ್ತಿದ್ದರು.
ಸಭೆ ವೇಳೆ ದಾಳಿ ಮಾಡಿದ್ದ ಚುನಾವಣಾಧಿ
ಕಾರಿಗಳು ಶಾಸಕರ ಭಾಷಣದ ವೇಳೆ ಮೈಕ್ ಪಡೆದು ಕಾರ್ಯಕ್ರಮ ನಿಲ್ಲಿಸಿದ್ದರು. ಪರಿಶೀಲನೆ ವೇಳೆ ಸಂತೋಷ್ ಎಂಬುವವರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆಯಾಗಿದ್ದು, ಸಭಿಕರಿಗೆ ಊಟದ ವ್ಯವಸ್ಥೆ ಸಹ ಮಾಡಿರುವುದು ಪತ್ತೆಯಾಗಿತ್ತು.
ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಚುನಾವಣಾಧಿಕಾರಿ ವಿಜಯ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಶಾಸಕ ರೇಣುಕಾಚಾರ್ಯ, ಕಾರ್ಯಕ್ರಮ ಆಯೋಜಕ ಸಂತೋಷ ಎಂಬುವವರ ಮೇಲೆ ಸದ್ಯ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.