ಲಿಂಗಸುಗೂರ,ಮಾ.೩೧- ಈಗಾಗಲೆ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಸೇರಿದಂತೆ ನೀತಿ ಸಂಹಿತಿ ಉಲ್ಲಂಘಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಸಹಾಯಕ ಆಯುಕ್ತ ಅವಿನಾಶ ಶಿಂಧೆ ಸಂಜೀವನ ಹೇಳಿದರು.
ಸಹಾಯಕ ಆಯುಕ್ತ ಕಚೇರಿಯಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು, ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಜಾರಿಯಾದ ೨೪ ಗಂಟೆಯೊಳಗೆ ಅದರಂತೆ ಕ್ಷೇತ್ರದಲ್ಲಿ ಸರ್ಕಾರಿ, ಸಂಘ-ಸಂಸ್ಥೆಗಳ ಮೇಲೆ ಹಾಕಲಾಗಿ ೧೫೦೦ ಸ್ಥಳ ಖಾಸಗಿ ೧೮೦೦ ಕಡೆ ಪ್ರಚಾರ ಫಲಕ, ಧ್ವಜ ಸೇರಿದಂತೆ ತೆರವುಗೊಳಿಸಲಾಗಿದೆ. ಇನ್ನೂ ರಾಜಕೀಯ ಪಕ್ಷಗಳ ಬ್ಯಾನರ್, ಬಟ್ಟಿಂಗ್ಸ್ ತೆರೆವುಗೊಳಿಸುವ ಕಾರ್ಯ ನಡೆದಿದೆ.
ಒಟ್ಟು ೨೭೮ ಮತಗಟ್ಟೆಗಳಿದ್ದು, ಪುರುಷ ೧,೨೪,೧೨೬ ಮಹಿಳೆ ೧೨೫,೭೫೯, ಇತರ ೦೯, ಒಟ್ಟು ೨,೪೯,೮೮೫ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಅನುಮಾನಸ್ಪದವಾಗಿ ತಿರುಗಾಡುವ ವಾಹನ ವ್ಯಕ್ತಿಗಳ ಮೇಲೆ ನಿಗಾ ವಹಿಸಿದ್ದು ಅಂತರ ಜಿಲ್ಲಾ ಗಡಿ ಪ್ರದೇಶದ ಬ್ಯಾಲಿಹಾಳ, ಛತ್ತರ ಹಾಗೂ ರೋಡಲಬಂಡಾ(ಕ್ಯಾಂಪ್), ಚೆಕ್ ಪೋಷ ತೆರೆಯಲಾಗಿದೆ ಎಂದು ತಿಳಿಸಿದರು.
ಚುನಾವಣೆ ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ರಾಜಕೀಯ ಪ್ರಚಾರ ಸೇರಿದಂತೆ ಸಾರ್ವಜನಿಕರ ಸಭೆ, ಸಮಾರಂಭ ಮದುವೆಗಳಿಗೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ, ಏಕ ಗವಾಕ್ಷಿ ಪದ್ಧತಿಯಡಿ ಸಹಾಯಕ ಆಯುಕ್ತ ಕಚೇರಿ ಈಗಾಗಲೆ ಪ್ಲೇಯಿಂಗ್ ಸ್ಕ್ಯಾಡ್, ವಿಡಿಯೋ ಸ್ಕ್ಯಾಡ್, ಚುನಾವಣಾ ಖರ್ಚು-ವೆಚ್ಚ ತಂಡಗಳು ಕ್ಷೇತ್ರದಲ್ಲಿ ಸಕ್ರಿಯವಾಗಿವೆ. ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆ ಉಲ್ಲಂಘಸಿದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.
ಚುನಾವಣೆ ಸುಸೂತ್ರವಾಗಿ ನಡೆಯಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು. ಚುನಾವಣೆಯಲ್ಲಿ ಹಣ ಹಂಚುವುದು ಸೇರಿದಂತೆ ಕಾನೂನು ಬಾಹಿರ ಕೆಲಸಗಳು ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ವಜ್ಜಲ್‌ಗೆ ನೋಟಿಸ್ : ಸಾಮಾಜಿಕ ಜಾಲ ತಾಣದಲ್ಲಿ ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಬಗ್ಗೆ ಮಾಜಿ ಶಾಸಕ, ಹಟ್ಟಿ ಚಿನ್ನದಗಣಿ ಅಧ್ಯಕ್ಷ ಬಿಜೆಪಿ ಅಕಾಂಕ್ಷಿ ಮಾನಪ್ಪ ವಜ್ಜಲ್ ರವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಯಾರೇ ಆಗಲಿ ನೀತಿ ಸಂಹಿತಿ ಉಲ್ಲಂಘಿಸಿದರೆ ಸಹಿಸುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ ಡಿ.ಎಸ್ ಜಮದಾರ, ಇಒ ಅಮರೇಶ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋವಿಂದರೆಡ್ಡಿ, ಸಿಬ್ಬಂದಿಗಳಾದ ಬಸವರಾಜ, ಸಾಗರ, ಸಲೀಂ, ಸುಜಾತ ಸೇರಿದಂತೆ ಇದ್ದರು.