ನವದೆಹಲಿ,ಮೇ೨೭:ಬಿಜೆಪಿಯೇತರ ಸರ್ಕಾರಗಳು ಆಡಳಿತ ನಡೆಸುತ್ತಿರುವ ೭ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ನೀತಿ ಆಯೋಗ ಸಭೆಗೆ ಗೈರಾಗಿದ್ದಾರೆ.ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಗೈರು ಹಾಜರಿಗೆ ಅನಾರೋಗ್ಯದ ಕಾರಣ ನೀಡಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೈರು ಹಾಜರಿಗೆ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.ಪಂಜಾಬ್‌ನ ಮುಖ್ಯಮಂತ್ರಿ ಭಗವಂತಮಾನ್ ಪಂಜಾಬ್ ಹಿತಾಸಕ್ತಿಗಳ ಕುರಿತಂತೆ ಕೇಂದ್ರ ಗಮನಹರಿಸುತ್ತಿಲ್ಲ.ಈ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.ಹಿಂದಿನ ಸಭೆಯಲ್ಲಿ ಅಂದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ಗ್ರಾಮೀಣಾಭಿವೃದ್ಧಿ ನಿಧಿ ಹುಲ್ಲುಗಾವಲು ಸುಡುವಿಕೆ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ್ದರೂ ಸಹ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ. ಈ ಸಭೆ ಕೇವಲ ಫೋಟೊ ಸೆಷೆನ್ ಎಂದು ಕರೆದಿರುವ ಮಾನ್, ನಾವು ಪ್ರಸ್ತಾಪಿಸಿರುವ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಪರಿಹಾರ ನೀಡುವವರೆಗೂ ಸಭೆಯಲ್ಲಿ ಭಾಗವಹಿಸುವುದರಿಂದ ಪ್ರಯೋಜನವಿಲ್ಲ ಎಂದಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸಜ್ಜಾಗಿರುವ ಪ್ರತಿಪಕ್ಷದ ನಾಯಕ ತೆಲಂಗಾಣದ ಕೆ. ಚಂದ್ರಶೇಖರರಾವ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ಹಾಗೂ ಇತರ ಮೂರು ಪ್ರತಿಪಕ್ಷ ನಾಯಕರು ಸಭೆಯಿಂದ ಹೊರಗುಳಿದಿದ್ದಾರೆ.ಮುಖ್ಯಮಂತ್ರಿಗಳು ನೀತಿ ಆಯೋಗದ ಸಭೆಗೆ ಗೈರಾಗುವ ಮೂಲಕ ತಮ್ಮದೇ ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ೧೦೦ಕ್ಕೂ ಹೆಚ್ಚು ಪ್ರಮುಖ ವಿಷಯಗಳನ್ನು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಾತಿನಿಧ್ಯ ಇಲ್ಲದ ರಾಜ್ಯಗಳು ಸೋಲನುಭವಿಸುತ್ತವೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.ಬಿಜೆಪಿಯೇತರ ಮುಖ್ಯಮಂತ್ರಿಗಳು ಸಭೆಯನ್ನು ಬಹಿಷ್ಕರಿಸುತ್ತಿದ್ದಾರೆ ಎಂದರೆ ಕೇಂದ್ರ ಸರ್ಕಾರ ಅವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಶಿವಸೇನೆನಾಯಕ ಸಂಜಯ್ ರಾವತ್ ಹೇಳಿದ್ದಾರೆ.