ನೀತಿಸಂಹಿತೆ ಉಲ್ಲಂಘನೆ ಕಂಡು ಬಂದರೆ ಪ್ರಕರಣ ದಾಖಲಿಸಿ

ಮೈಸೂರು,ಏ.07:- ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಪ್ರಕರಣ ದಾಖಲು ಮಾಡಬೇಕೆಂದು ಸ್ಥಿರ ಕಣ್ಗಾವಲು ತಂಡ ಹಾಗೂ ಕ್ಷಿಪ್ರ ಕ್ರಿಯಾ ತಂಡ ಅಧಿಕಾರಿಗಳಿಗೆ ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿಯವರಾದ ಕೆ.ಎಂ.ಗಾಯಿತ್ರಿ ಅವರು ತಿಳಿಸಿದರು.
ಹೆಚ್.ಡಿ.ಕೋಟೆ ತಾಲ್ಲೂಕಿನ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ಗುರುವಾರ ಚುನಾವಣೆ ಸಂಬಂಧಿಸಿದಂತೆ ಸ್ಥಿರ ಕಣ್ಗಾವಲು ತಂಡ (SSಖಿ) ಹಾಗೂ ಕ್ಷಿಪ್ರ ಕ್ರಿಯಾ ತಂಡ (ಈSಖಿ)ಗಳಿಗೆ ನಡೆದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮಾನಸಿಕವಾಗಿ ಸಿದ್ಧರಾಗಿ ಎಲ್ಲರೂ ಜೊತೆಗೂಡಿ ಒಟ್ಟಾಗಿ ಕಾರ್ಯನಿರ್ವಹಿದಾಗ ಮಾತ್ರ ಚುನಾವಣೆ ಸಮಯದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯಬಹುದು ಚುನಾವಣೆಗೆ ನೇಮಕ ಆಗಿರುವ ಅಧಿಕಾರಿಗಳಿಂದ ಕರ್ತವ್ಯ ಲೋಪ ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಷಿಪ್ರ ಕ್ರಿಯಾ ತಂಡ (ಈSಖಿ)ದವರು ಆಯಾಯ ಮತಗಟ್ಟೆ ವ್ಯಾಪ್ತಿಯಲ್ಲಿ ಬೂತ್ ಲೆವೆಲ್ ಅಧಿಕಾರಿಗಳಾದ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರ ಮಾಹಿತಿಯನ್ನು ಸಂಗ್ರಹಿಸಿಕೊಂಡು ಮತದಾರರ ಜಾಗೃತಿ ತಂಡ ರಚಿಸಿಕೊಂಡರೆ ನಿಮ್ಮ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗಲಿದೆ ಎಂದರು.
ಚುನಾವಣೆ ಅವಧಿಯಲ್ಲಿ ದಾಖಲೆ ಇಲ್ಲದೆ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುವಂತಿಲ್ಲ. 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸುವ ವ್ಯಕ್ತಿಗಳಿಂದ ಹಣ ಮುಟ್ಟುಗೊಲು ಹಾಕಿಕೊಳ್ಳುವಾಗ ಅಧಿಕಾರಿಗಳು ಉದ್ವೇಗಕ್ಕೆ ಒಳಗಾಗದೆ ಸಾವಧಾನವಾಗಿ ಮಾತನಾಡಬೇಕು. ಅಭ್ಯರ್ಥಿಗಳು 40 ಲಕ್ಷದ ವರೆಗೂ ಚುನಾವಣಾ ಖರ್ಚು ಮಾಡಬಹುದಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಅಭ್ಯರ್ಥಿಗಳ ವೆಚ್ಚದ ಬಗ್ಗೆ ನಿಗಾವಹಿಸಬೇಕು ಎಂದರು.
ಮತಗಟ್ಟೆ ಕೇಂದ್ರಗಳಲ್ಲಿ ವಯಸ್ಸಾದವರಿಗೆ ಬಿಸಿಲಲ್ಲಿ ನಿಲ್ಲಲು ಸಾಧ್ಯವಿಲ್ಲ, ಅಂಥಹವರಿಗೆ ಕೂರಲು ಕಾಯ್ದಿರಿಸುವಿಕೆ ಕೊಠಡಿ ಇರಬೇಕು ಹಾಗೂ ಎಲ್ಲೆಲ್ಲಿ ಒಂದು ಶೌಚಾಲಯ ಇದೆಯೋ ಅಲ್ಲಿ ತಾತ್ಕಾಲಿಕವಾಗಿ ಮತ್ತೊಂದು ಶೌಚಾಲಯ ನಿರ್ಮಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಚುನಾವಣಾ ಅಕ್ರಮಗಳು ಕಂಡು ಬಂದರೆ ಸಿವಿಜಿಲ್ ಆಪ್ ಮೂಲಕ ಸಾರ್ವಜನಿಕರು ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ತರಬೇತಿ ಕಾರ್ಯಕ್ರದಲ್ಲಿ ಭಾಗವಹಿಸಿದ ಪ್ರಾಚ್ಯವಸ್ತು ಸಂಗ್ರಹಾಲಯದ ಆಯುಕ್ತರಾದ ದೇವರಾಜ್ ಅವರು ಮಾತನಾಡಿ ಚುನಾವಣಾ ನೀತಿ ಸಂಹಿತೆ ಕುರಿತು ಮಾಹಿತಿ ನೀಡಿ ನೀತಿ ಸಂಹಿತೆಯ ಬಗ್ಗೆ ಪ್ರತಿಯೊಬ್ಬ ಮತದಾರರಲು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯವರಾದ ಕುಮುದ, ಹೆಚ್.ಡಿ.ಕೋಟೆ ತಹಶೀಲ್ದಾರ್ ರವರಾದ ಮಹೇಶ್ , ಸರಗೂರು ತಹಶೀಲ್ದಾರ್ ರವರಾದ ಆಲಂ, ಹೆಚ್.ಡಿ.ಕೋಟೆ ಕಾರ್ಯ ನಿರ್ವಾಹಕಾಧಿಕಾರಿ ಜೆರಾಲ್ಡ್ ರಾಜೇಶ್, ಸರಗೂರು ಕಾರ್ಯ ನಿರ್ವಾಹಕಾಧಿಕಾರಿ ಸುಷ್ಮಾ.ಕೆ, ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಎ.ಎನ್. ಸುಬ್ರಹ್ಮಣ್ಯ ಶರ್ಮ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.