ನೀಟ್ ಹಗರಣ ಕಠಿಣಕ್ರಮಕ್ಕೆ ಪ್ರಿಯಾಂಕಾ ಆಗ್ರಹ

ನವದೆಹಲಿ,ಜೂ.೨೨:ನೀಟ್ ಪ್ರಶ್ನೆಪತ್ರಿಕೆ ಹಗರಣ ಹಾಗೂ ಬಿಜೆಪಿ ಭ್ರಷ್ಟಾಚಾರದಿಂದ ದೇಶ ದುರ್ಬಲವಾಗಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ನಡೆದಿರುವ ಹಗರಣದ ಬಗ್ಗೆ ಕಠಿಣ ಕ್ರಮಕೈಗೊಳ್ಳಬೇಕು. ಇದರಿಂದ ಅನ್ಯಾಯವಾಗಿರುವ ೨೪ ಲಕ್ಷ ವಿದ್ಯಾರ್ಥಿಗಳಿಗೆ ನ್ಯಾಯ ದೊರಕುವಂತಾಗಲಿದೆ ಎಂದು ಸಾಮಾಜಿಕ ಜಲತಾಣ ಎಕ್ಸ್‌ನಲ್ಲಿ ಅವರು ಆಗ್ರಹಿಸಿದ್ದಾರೆ.
ಕಳೆದ ೫ ವರ್ಷಗಳಲ್ಲಿ ೪೩ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಇಂತಹ ಪ್ರಕರಣಗಳು ಬಿಜೆಪಿ ಆಡಳಿತದಲ್ಲಿ ರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಅವರು ದೂರಿದ್ದು, ಇದರಿಂದಾಗಿ ಕೋಟ್ಯಂತರ ಯುವಕರ ಭವಿಷ್ಯ ನಾಶವಾಗಿದೆ ಎಂದು ಕಿಡಿಕಾರಿದ್ದಾರೆ.
ದೇಶವು ಅತೀ ಹೆಚ್ಚು ಯುವ ಜನತೆಯನ್ನು ಹೊಂದಿದೆ. ಈ ಯುವ ಜನರನ್ನು ಕೌಶಲ್ಯ ಮತ್ತು ಸಮರ್ಥರನ್ನಾಗಿ ಮಾಡುವ ಬದಲಿಗೆ ಅವರನ್ನು ಬಿಜೆಪಿ ಸರ್ಕಾರ ದುರ್ಬಲಗೊಳಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿವಿಧ ಪರೀಕ್ಷೆಗಳಿಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಮೊದಲಿನಿಂದಲೂ ತಯಾರಿ ನಡೆಸಿರುತ್ತಾರೆ. ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ವರ್ಷಗಟ್ಟಲೆ ಕಾಯುತ್ತಾರೆ. ಅರ್ಜಿ ಸಲ್ಲಿಸಲು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದಿಂದ ವಿದ್ಯಾರ್ಥಿಗಳ ಇಡೀ ಶ್ರಮ ವ್ಯರ್ಥವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ.