ನೀಟ್ ಸಾಧಕನಿಗೆ ರೂ. 1 ಲಕ್ಷ ನಗದು ಬಹುಮಾನ

ಬೀದರ್: ನ.17:ಬೆಂಗಳೂರಿನ ಅಟೊಮಿಕ್ ಅಕಾಡೆಮಿ ಸಂಯೋಜಿತ ಇಲ್ಲಿನ ಶ್ರೀ ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಸಕ್ತ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)
ಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ಟಾಪರ್ ಆಗಿ ಹೊರಹೊಮ್ಮಿದ ಕಾಲೇಜು ವಿದ್ಯಾರ್ಥಿ ಸಾಯಿಕಿರಣ ರಮೇಶ ಕುಲಕರ್ಣಿ ಅವರಿಗೆ ರೂ. 1 ಲಕ್ಷ ನಗದು ಬಹುಮಾನ ನೀಡಿದೆ.
ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು ಸಾಯಿಕಿರಣ ಅವರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ಹಾಗೂ ಚೆಕ್ ನೀಡಿ ಗೌರವಿಸಿದರು.
ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ಪ್ರತಿಭೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಸತತ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಬಹುದಾಗಿದೆ ಎಂದು ತಿಳಿಸಿದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಆಂಜನೇಯ ಮಾತನಾಡಿ, ಪಿಯುಸಿ ಶಿಕ್ಷಣ ವಿದ್ಯಾರ್ಥಿ ಜೀವನದ ನಿರ್ಣಾಯಕ ಹಂತವಾಗಿದೆ. ಎರಡು ವರ್ಷ ಏಕಾಗ್ರತೆಯಿಂದ ವ್ಯಾಸಂಗದಲ್ಲಿ ತೊಡಗಿಸಿಕೊಂಡಲ್ಲಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈಯಬಹುದು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ಅಟೊಮಿಕ್ ಅಕಾಡೆಮಿ ನಿರ್ದೇಶಕ ಪ್ರೊ. ಶ್ರೀಧರ ಎಸ್. ಮಾತನಾಡಿ, ಆಟೊಮಿಕ್ ಅಕಾಡೆಮಿಯು ಶ್ರೀ ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡು ಬೀದರ್ ಜಿಲ್ಲೆಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ಈ ಬಾರಿಯ ನೀಟ್ ಫಲಿತಾಂಶ ಇದಕ್ಕೆ ನಿದರ್ಶನವಾಗಿದೆ. ಸಾಯಿಕಿರಣ ಆರ್. ಕುಲಕರ್ಣಿ ನೀಟ್‍ನಲ್ಲಿ 720 ರ ಪೈಕಿ 685 ಅಂಕ ಪಡೆದು ಕಲ್ಯಾಣ ಕರ್ನಾಟಕಕ್ಕೆ ಟಾಪರ್ ಆಗಿದ್ದು, ಬೀದರ್ ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.
ಶ್ರೀ ಮಾತೆ ಮಾಣಿಕೇಶ್ವರಿ ಪದವಿಪೂರ್ವ ವಿಜ್ಞಾನ ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜು 13 ವರ್ಷಗಳಿಂದ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಗುದಗೆ ಆಸ್ಪತ್ರೆಯ ಡಾ. ಸಚಿನ್ ಗುದಗೆ ಉದ್ಘಾಟಿಸಿದರು. ಅಟೊಮಿಕ್ ಅಕಾಡೆಮಿ ನಿರ್ದೇಶಕರಾದ ಎನ್.ವಿ. ಮಾನೆ, ರಘುನಂದ ಎಸ್., ಆರತಿ ಆರ್. ಕುಲಕರ್ಣಿ, ಸುರೇಶ ಕುಲಕರ್ಣಿ, ವೈಶಾಲಿ ಎಸ್. ಕುಲಕರ್ಣಿ ಉಪಸ್ಥಿತರಿದ್ದರು. ಕಾಲೇಜು ಪ್ರಾಚಾರ್ಯ ಲೋಕೇಶ ಉಡಬಾಳೆ ಸ್ವಾಗತಿಸಿದರು. ಉಪನ್ಯಾಸಕ ಚನ್ನಬಸವ ಬಿರಾದಾರ ನಿರೂಪಿಸಿದರು. ಉಪನ್ಯಾಸಕ ಗುಂಡಪ್ಪ ಕುಂಬಾರ ವಂದಿಸಿದರು.
ಇದಕ್ಕೂ ಮುನ್ನ ಶಿವನಗರದ ಪಾದಚಾರಿ ಮಾರ್ಗದಿಂದ ನ್ಯೂ ಆದರ್ಶ ಕಾಲೊನಿಯ ಕಾಲೇಜುವರೆಗೆ ಸಾರೋಟಿನಲ್ಲಿ ಸಾಯಿಕಿರಣ ಅವರ ಮೆರವಣಿಗೆ ಮಾಡಲಾಯಿತು.