ನೀಟ್ ರಾಜ್ಯಕ್ಕೆ 48ನೇ ರ್‍ಯಾಂಕ್:ಬೈರೇಶ್‌ಗೆ ಸನ್ಮಾನ

ಕೋಲಾರ, ಜೂ. ೨೭- ಮಂಗಳೂರಿನ ಎಕ್ಸ್‌ಫರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಹಾಗೂ ಕೋಲಾರ ತಾಲ್ಲೂಕಿನ ವಕ್ಕಲೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೆ.ರಾಧಮ್ಮ,ಎಸ್.ಬಿ.ಹರೀಶ್ ದಂಪತಿಗಳ ಪುತ್ರ ಎಸ್.ಹೆಚ್.ಬೈರೇಶ್ ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ೪೮ನೇ ರ್‍ಯಾಂಕ್ ಹಾಗೂ ರಾಜ್ಯಮಟ್ಟದಲ್ಲಿ ೨ನೇ ರ್‍ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದು, ಶಿಕ್ಷಕ ಗೆಳೆಯರ ಬಳಗದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್ ಮಾತನಾಡಿ, ಸಾಧನೆಗೆ ನಿರಂತರ ಪರಿಶ್ರಮ,ಕಲಿಕಾ ಆಸಕ್ತಿ, ಶ್ರದ್ಧೆ ಅತಿ ಮುಖ್ಯವಾಗಿದ್ದು, ಅಂತಹ ಮಕ್ಕಳು ಮಾತ್ರವೇ ಜೀವನದಲ್ಲಿ ಸಾಧಕರಾಗಿ ಸಮಾಜ ಗುರುತಿಸುವಂತಾಗುತ್ತಾರೆ ಎಂದು ತಿಳಿಸಿದರು.
ನೀಟ್ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿರುವುದು ಶ್ಲಾಘನೀಯವಾಗಿದ್ದು, ಅದರಲ್ಲೂ ಓರ್ವ ಶಿಕ್ಷಕರ ಪುತ್ರನಾಗಿರುವುದು ಶಿಕ್ಷಕ ಗೆಳೆಯರ ಬಳಗಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಅಭಿನಂದಿಸಿದರು.
ಶಿಕ್ಷಕ ಗೆಳೆಯರ ಬಳಗದ ಕಾರ್ಯದರ್ಶಿ ವೆಂಕಟಾಚಲಪತಿಗೌಡ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೋಲಾರ ಜಿಲ್ಲೆಯ ಮಕ್ಕಳು ಸದಾ ಸಾಧಕರಾಗಿಯೇ ಹೊರಹೊಮ್ಮುತ್ತಿದ್ದಾರೆ, ಕೆಎಎಸ್ ಎಂದರೆ ಒಂದು ಕಾಲದಲ್ಲಿ ಕೋಲಾರ ಅಡ್ಮಿನಿಸ್ಟ್ರೇಷನ್ ಸರ್ವೀಸ್ ಎಂಬ ಮಾತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಸಾಧಕರ ಸಂಖ್ಯೆ ಕುಸಿಯುತ್ತಿದೆ ಎಂದು ವಿಷಾದಿಸಿದರು.
ಇತರೆ ವಿದ್ಯಾರ್ಥಿಗಳೂ ಬೈರೇಶ್ ಸಾಧನೆಯನ್ನೇ ಮಾರ್ಗದರ್ಶನವಾಗಿ ಪಡೆದು ಮುಂದಡಿ ಇಡಬೇಕು, ನೀವು ಸಮಾಜ ಗುರುತಿಸುವಂತೆ ಬದುಕು ಕಟ್ಟಿಕೊಳ್ಳಬೇಕು, ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ದುಶ್ಚಟಗಳಿಂದ ದೂರವಿದ್ದು, ಕೇವಲ ಕಲಿಕೆಯೇ ತನ್ನ ಗುರಿ ಎಂದು ಭಾವಿಸಿ ಶ್ರದ್ಧೆಯಿಂದ ಸಾಗಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.
ಶಿಕ್ಷಕ ಗೆಳೆಯರ ಬಳಗದ ಸೋಮಶೇಖರ್ ಮಾತನಾಡಿ, ೨೦೨೨-೨೩ನೇ ಸಾಲಿನಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ೭೨೦ ಅಂಕಗಳಿಗೆ ೭೧೦ ಅಂಕ ಗಳಿಸುವ ಮೂಲಕ ಬೈರೇಶ್ ಈ ಸಾಧನೆ ಮಾಡಿದ್ದು, ಇದೇ ವಿದ್ಯಾರ್ಥಿ ಕೆ-ಸಿಇಟಿಯಲ್ಲೂ ಸಾಧನೆ ಮಾಡಿದ್ದಾನೆ. ಕೃಷಿ ವಿಜ್ಞಾನದಲ್ಲಿ ಪ್ರಥಮ ರ್‍ಯಾಂಕ್ ಹಾಗೂ ಪಶುವೈದ್ಯಕೀಯ ವಿಜ್ಞಾನದಲ್ಲಿ ೪ನೇ ರ್‍ಯಾಂಕ್ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಗೆಳೆಯರ ಬಳಗದ ಪದಾಧಿಕಾರಿಗಳಾದ ವೆಂಕಟರಾಂ, ಚಂದ್ರಪ್ಪ, ಚಿಕ್ಕಣ್ಣ, ಎನ್.ಕೃಷ್ಣಪ್ಪ, ಸಾಧಕ ವಿದ್ಯಾರ್ಥಿಯ ತಂದೆ ಎಸ್.ಬಿ.ಹರೀಶ್, ತಾಯಿ ಶಿಕ್ಷಕಿ ಕೆ.ರಾಧಮ್ಮ ಮತ್ತಿತರರಿದ್ದರು.