ನೀಟ್ ರದ್ಧತಿಗೆ ರಾಜ್ಯಪಾಲ ಅನುಮತಿ ಬೇಕಿಲ್ಲ

ಚೆನ್ನೈ, ಆ.೧೪- ತಮಿಳುನಾಡಿನಲ್ಲಿ ನೀಟ್ ಪರೀಕ್ಷೆಯನ್ನು ತೆಗೆದುಹಾಕುವ ರಾಜ್ಯ ಸರ್ಕಾರದ ಮಸೂದೆ ಆಕ್ಷೇಪಿಸಿ, ಅದಕ್ಕೆ ಅನುಮತಿ ನೀಡುವುದಿಲ್ಲ ಎಂದಿದ್ದ ರಾಜ್ಯಪಾಲ ಆರ್.ಎನ್. ರವಿ ಅವರಿಗೆ ತ.ನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ತಿರುಗೇಟು ನೀಡಿದ್ದು, ಮಸೂದೆಗೆ ರಾಜ್ಯಪಾಲರ ಅನುಮತಿಯೇ ಬೇಕಿಲ್ಲ ಎಂದಿದ್ದಾರೆ.

ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನೀಟ್ ವಿರೋಧಿ ಮಸೂದೆಗೆ ನಾನು ಯಾವುದೇ ಕಾರಣಕ್ಕೂ ಅನುಮೋದನೆ ನೀಡುವುದಿಲ್ಲ ಎಂದು ಇತ್ತೀಚೆಗೆ, ರಾಜ್ಯಪಾಲ ರವಿ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಸಚಿವ ಸುಬ್ರಮಣಿಯನ್ ಪ್ರಕ್ರಿಯಿಸಿ, ಈ ಬಾರಿ ಬೇರೆ ಆಯ್ಕೆಯೇ ಇಲ್ಲದೇ, ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗೆ ಕಳುಹಿಸಿದ್ದಾರೆ. ಅಲ್ಲಿಗೆ ಅವರ ಕೆಲಸ ಮುಗಿದಿದೆ. ಈ ಮಸೂದೆ ವಿಚಾರವಾಗಿ ಅವರು ಇನ್ನೇನನ್ನೂ ಮಾಡುವಂತಿಲ್ಲ ಹಾಗೂ ಮಸೂದೆಗೆ ಅವರ ಅನುಮತಿಯೂ ಬೇಕಿಲ್ಲ ಎಂದು ಹೇಳಿದ್ದಾರೆ.