ನೀಟ್ ಪರೀಕ್ಷೆ ಮೋದಿ ರೋಡ್ ಶೋ ಬದಲಾವಣೆ

ಬೆಂಗಳೂರು,ಮೇ.೫-ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಬೆಂಗಳೂರಿನಲ್ಲಿ ನಡೆಸಲಿರುವ ರೋಡ್ ಶೋನಲ್ಲಿ ಬದಲಾವಣೆ ಮಾಡಲಾಗಿದೆ. ಭಾನುವಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕಚೇರಿ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.ಪ್ರಧಾನಿ ಮೋದಿ ಅವರು ನಮ್ಮ ಕರ್ನಾಟಕ ಮತಯಾತ್ರೆಯ ಹೆಸರಿನಲ್ಲಿ ಬೆಂಗಳೂರಿನಲ್ಲಿ ನಾಳೆ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೧೨.೩೦ರವರೆಗೆ ರೋಡ್ ಶೋ ನಡೆಯಲಿದ್ದು, ಜೆ.ಪಿ.ನಗರದ ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶೋ ಆರಂಭವಾಗಲಿದೆ. ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ಟೆಂಪಲ್‌ವರೆಗೆ ರೋಡ್ ಶೋ ನಡೆಸಲಿದ್ದಾರೆ.ಮಿಲೇನಿಯಂ-ಸಾರಕ್ಕಿ ಜಂಕ್ಷನ್- ಸೌತ್ ಎಂಡ್ ಸರ್ಕಲ್-ಕೃಷ್ಣರಾವ್ ಪಾರ್ಕ್- ರಾಮಕೃಷ್ಣ ಆಶ್ರಮ- ಮಕ್ಕಳ ಕೂಟ-ಟೌನ್ ಹಾಲ್-ಕಾವೇರಿ ಭವನ-ಮೆಜೆಸ್ಟಿಕ್- ಮಾಗಡಿ ರೋಡ್- ಜಿಟಿ ವರ್ಲ್ಡ್ ಮಾಲ್-ಹೌಸಿಂಗ್ ಬೋರ್ಡ್-ಬಸವೇಶ್ವರ ನಗರ-ಶಂಕರ ಮಠ ಸರ್ಕಲ್- ಮೋದಿ ಆಸ್ಪತ್ರೆ ರಸ್ತೆ-ನವರಂಗ್ ಸರ್ಕಲ್-ಮಹಾಕವಿ ಕುವೆಂಪು ರಸ್ತೆ-ಮಲ್ಲೇಶ್ವರಂ ಸರ್ಕಲ್ -ಸಂಪಿಗೆ ರಸ್ತೆ- ಸರ್ಕಲ್ ಮಾರಮ್ಮ ದೇವಸ್ಥಾನ ಮೂಲಕ ಸಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬ್ರಿಗೇಡ್ ಮಿಲೇನಿಯಂ ಸಂಪರ್ಕ ಕಲ್ಪಿಸುವ ಆರ್‌ಬಿ ರಸ್ತೆಯಿಂದ ಬ್ಯಾರಿಕೇಡ್ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಯಾವುದೇ ಭದ್ರತೆ ಲೋಪವಾಗದಂತೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಶೋನಲ್ಲಿ ೪ ಕಿ.ಮೀ ಕಡಿತ!
ಮೇ.೭ರ ಬೆಳಗ್ಗೆ ೧೦ ಗಂಟೆಯಿಂದ ೧೧.೩೦ರವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಸುರಂಜನ್‌ದಾಸ್ ಸರ್ಕಲ್‌ನಿಂದ ಟ್ರಿನಿಟಿ ಸರ್ಕಲ್‌ವರೆಗೆ ರೋಡ್ ಶೋ ನಡೆಯಲಿದೆ.ಭಾನುವಾರ ನಡೆಯುವ ಪ್ರಧಾನಿ ರೋಡ್ ಶೋ ೪ ಕಿ.ಮೀ. ಕಡಿತ ಮಾಡಲಾಗಿದೆ. ನೀಟ್ ಪರೀಕ್ಷೆ ಹಿನ್ನೆಲೆ ರೋಡ್ ಶೋ ರೂಟ್‌ನಲ್ಲಿ ಬದಲಾವಣೆ ಮಾಡಲಾಗಿದ್ದು, ಟ್ರಾಫಿಕ್ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ಪ್ರಧಾನಿ ಕಚೇರಿ ನಿರ್ದೇಶನದಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ.
ಭಾನುವಾರದ ರೋಡ್ ಶೋ
ಬೆಮೆಲ್ ಸರ್ಕಲ್-ತಿಪ್ಪಸಂದ್ರ ಮುಖ್ಯರಸ್ತೆ-ಇಎಸ್‌ಐ ಆಸ್ಪತ್ರೆ, ಸಿಎಂಹೆಚ್ ರೋಡ್-ಇಂದಿರಾನಗರ-ಹಲಸೂರು ಪೊಲೀಸ್ ಸ್ಟೇಷನ್- ಎಂ.ಜಿ ರಸ್ತೆ-ಬ್ರಿಗೇಡ್ ರೋಡ್
ಶೋ ಗೆಸಕಲ ಸಿದ್ಧತೆ:
ಮೋದಿ ರೋಡ್ ಶೋಗೆ ಈಗಾಗಲೇ ಪೊಲೀಸರು, ಬಿಬಿಎಂಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ರೋಡ್ ಶೋ ನಡೆಯುವ ರಸ್ತೆಯಲ್ಲಿರುವ ಮರದ ಕೊಂಬೆಗಳನ್ನು ಕತ್ತರಿಸುವ ಕೆಲಸ ನಡೆಯುತ್ತಿದೆ. ಅಲ್ಲದೇ ರೋಡ್ ಶೋ ಸಾಗುವ ರಸ್ತೆಗಳಲ್ಲಿ ಸ್ಚಚ್ಛತೆ ಕಾರ್ಯವೂ ಸಹ ನಡೆಯುತ್ತಿದೆ. ಅಲ್ಲದೇ ಹೆಜ್ಜೆ-ಹೆಜ್ಜೆಗೂ ಪೊಲೀಸರ ಬಿಗಿ ಭದ್ರತೆ ಇರಲಿದೆ.