ನೀಟ್ ಪರೀಕ್ಷೆಗೆ ಬರೆದ 18.72 ಲಕ್ಷ ವಿದ್ಯಾರ್ಥಿಗಳು

ನವದೆಹಲಿ, ಜು.೧೭- ವೈದ್ಯಕೀಯ ಪದವಿಗೆ ಪ್ರವೇಶ ಪಡೆಯಲು ಕಡ್ಡಾಯವಾಗಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ ೨೦೨೨) ಇಂದು ನಡೆಯುತ್ತಿದ್ದು, ಈ ಬಾರಿ ದಾಖಲೆ ಸಂಖ್ಯೆಯ ಅಂದರೆ ೧೮.೭೨ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದರು.
ಕಳೆದ ವರ್ಷ ನೀಟ್ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ೨.೫೭ ಲಕ್ಷ ಮಂದಿ ಹೆಚ್ಚುವರಿ ಆಕಾಂಕ್ಷಿಗಳಿದ್ದಾರೆ. ೧೨ ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡ ೨೭೪.೩ರಷ್ಟು ಏರಿಕೆ ಕಂಡುಬಂದಿದೆ.
ಈ ಪೈಕಿ ೧೦.೬೪ ಲಕ್ಷ ಬಾಲಕಿಯರು ಸೇರಿದ್ದಾರೆ.ಮತ್ತೊಂದೆಡೆ ತಮಿಳು ಭಾಷೆಯಲ್ಲಿ ನೋಂದಣಿ ಶೇಕಡ ೬೦ರಷ್ಟು ಹೆಚ್ಚಿದೆ. ಎಂಬಿಬಿಎಸ್, ಬಿಡಿಎಸ್, ಬ್ಯಾಚುಲರ್ ಆಫ್ ಆಯುರ್ವೇದ, ಮೆಡಿಸಿನ್ ಅಂಡ್ ಸರ್ಜರಿ (ಬಿಎಎಂಎಸ್), ಬ್ಯಾಚುಲರ್ ಆಫ್ ಸಿದ್ದ ಮೆಡಿಸಿನ್ ಆಯಂಡ್ ಸರ್ಜರಿ (ಬಿಎಸ್‌ಎಂಎಸ್), ಬ್ಯಾಚುಲರ್ ಆಫ್ ಯುನಾನಿ ಮೆಡಿಸಿನ್ ಆಯಂಡ್ ಸರ್ಜರಿ (ಬಿಯುಎಂಎಸ್) ಮತ್ತು ಬ್ಯಾಚುಲರ್ ಆಫ್ ಹೋಮಿಯೋಪಥಿಕ್ ಮೆಡಿಸಿನ್ ಆಯಂಡ್ ಸರ್ಜರಿ (ಬಿಎಚ್‌ಎಂಎಸ್) ಜತೆಗೆ ನರ್ಸಿಂಗ್‌ನಲ್ಲಿ ಬಿಎಸ್ಸಿ (ಆನರ್ಸ್) ಪದವಿ ಪ್ರವೇಶಕ್ಕೆ ಈ ಪ್ರವೇಶ ಪರೀಕ್ಷೆ ಕಡ್ಡಾಯ.
ಮಹಾರಾಷ್ಟ್ರದಿಂದ ಅತ್ಯಧಿಕ ಅಂದರೆ ೨.೫ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ. ಉತ್ತರ ಪ್ರದೇಶ (೨.೧ ಲಕ್ಷ), ಕರ್ನಾಟಕ (೧.೩ ಲಕ್ಷ), ಕೇರಳ (೧.೨ ಲಕ್ಷ), ರಾಜಸ್ಥಾನ ಹಾಗೂ ತಮಿಳುನಾಡು (ತಲಾ ೧.೪ ಲಕ್ಷ) ರಾಜ್ಯಗಳಲ್ಲೂ ಗಣನೀಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದಿಂದ ತಲಾ ೯೦ ಸಾವಿರ ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಈ ಮೂರು ರಾಜ್ಯಗಳು ಸೇರಿದಂತೆ ಒಂಬತ್ತು ರಾಜ್ಯಗಳಿಂದ ಶೇಕಡ ೭೦ರಷ್ಟು ವಿದ್ಯಾರ್ಥಿಗಳಿದ್ದಾರೆ.
ಇನ್ನೂ, ಇಡೀ ದೇಶದಲ್ಲಿ ನೋಂದಣಿಯಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡ ೫೫ರಷ್ಟು ಮಂದಿ ಈ ಆರು ರಾಜ್ಯಗಳಿಗೆ ಸೇರಿದರಾಗಿದ್ದಾರೆ.