ನೀಟ್‍ನಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

ಬೀದರ:ನ.5: ರಾಷ್ಟ್ರೀಯ ಅನುದಾನ ರಹಿತ ಶಾಲಾ ಶಿಕ್ಷಕರ ಸಂಘ, ಬೀದರ ವತಿಯಿಂದ ಶಾಹೀನ್ ಕಾಲೇಜಿನ ನೀಟ್ ಸಾಧಕ ವಿದ್ಯಾರ್ಥಿಗಳಿಗೆ ದಿನಾಂಕ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳಾದ ಕಾರ್ತಿಕರೆಡ್ಡಿ, ಅರ್ಬಾಜ್ ಹಾಗೂ ಪ್ರಾಚಾರ್ಯ ಖಾದ್ರಿಯವರಿಗೂ ಮತ್ತು ಶಾಹೀನ್ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ್ ಅವರಿಗೂ ಸನ್ಮಾನಿಸಲಾಯಿತು.

ಎನ್.ಜಿ.ಟಿ.ಓ. ಬೀದರ ಘಟಕದ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ವರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಶಾಹೀನ್ ಕಾಲೇಜಿನ ಶೈಕ್ಷಣಿಕ ಸಾಧನೆಯು ಜಿಲ್ಲೆಯ ಜನರು ಹೆಮ್ಮೆ ಪಡುವಂತೆ ಮಾಡಿದೆ. 12ನೇ ಶತಮಾನದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಕಾಲಘಟ್ಟದಲ್ಲಿ ನಂತರ 14ನೇ ಶತಮಾನದಲ್ಲಿ ಮೊಹ್ಮದ್ ಗವಾನರ ಶೈಕ್ಷಣಿಕ ಕ್ರಾಂತಿಯಿಂದ ದೇಶ-ವಿದೇಶದ ಜನ ಜ್ಞಾನ ಪಡೆಯಲು ಬೀದರಗೆ ಬರುತ್ತಿದ್ದರು. ಅದರಂತೆ ಅಬ್ದುಲ್ ಖದೀರ್‍ರವರ ಶೈಕ್ಷಣಿಕ ಕ್ರಾಂತಿಯ ಕಾಲಘಟ್ಟದಲ್ಲಿಯೂ ಜ್ಞಾನಾರ್ಜನೆಗಾಗಿ ದೇಶ-ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಇಂತಹ ಕಾರ್ಯದಕ್ಷತೆ, ಕಾರ್ಯಶೈಲಿ ಇರುವ ಮೇಧಾವಿಯೊಬ್ಬರ ಒಡನಾಟ ದೊರಕಿರುವುದಕ್ಕೆ ನಾವು ಸುದೈವಿಗಳು. ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದವರಾದ ನಮಗೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ನಮ್ಮ ಖುಷಿ ಇಮ್ಮಡಿಗೊಳಿಸಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಶಾಹೀನ್ ಕಾಲೇಜಿನ ಕಾರ್ಯದರ್ಶಿ ಅಬ್ದುಲ್ ಖದೀರ್ ಮಾತನಾಡುತ್ತ, ಹಿಂದು-ಮುಸ್ಲಿಂರು ನಮ್ಮ ಸಂಸ್ಥೆಯ ಎರಡು ಭುಜಗಳಿದ್ದಂತೆ, ನಮ್ಮ ಸಂಸ್ಥೆಯು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸುವಲ್ಲಿ ಸತತ ಪ್ರಯತ್ನವಿದೆ. ಜಿಲ್ಲೆಯ ಸಮಸ್ತ ಜನತೆ ನಮ್ಮೊಂದಿಗಿದ್ದರೆ ನಾವು ನಮ್ಮ ವಿದ್ಯಾರ್ಥಿಗಳೊಂದಿಗಿದ್ದೇವೆ. ಬಸವಣ್ಣನವರ ಕಾಲದಿಂದ ಆಧುನಿಕ ಕಾಲದವರೆಗೂ ದೇಶ-ವಿದೇಶದಿಂದ ಜ್ಞಾನ ಸಂಪಾದನೆಗಾಗಿ ಜನ ನಮ್ಮ ಬೀದರಿಗೆ ಬರುತ್ತಿದ್ದರು. ಆದರೆ ಕೆಲವು ದಶಕಗಳಿಂದ ನಮ್ಮ ಜನ ಬೇರೆಡೆಗೆ ವಿದ್ಯಾರ್ಜನೆಗೆ ಹೋಗುತ್ತಿದ್ದರು. ಇದರಿಂದ ನಮ್ಮ ಇತಿಹಾಸವೇ ಪಲ್ಲಟವಾಗಿದಂತಾಗಿತ್ತು. ಅಂದಿನ ಇತಿಹಾಸವನ್ನು ಮರುಕಳಿಸುವುದೇ ನಮ್ಮ ಧ್ಯೇಯ ಎಂದರು. ಜೊತೆಗೆ ನೀಟ್‍ನಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆಗೈಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಖಾಸಗಿ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಂಪತಕುಮಾರ, ಕಾರ್ಯದರ್ಶಿ ಸಂತೋಷ ಬೋರೆ ಹಾಗೂ ಶಾಹೀನ ಉಪನ್ಯಾಸಕ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಎನ್.ಜಿ.ಟಿ.ಓ. ಜಿಲ್ಲಾ ಮಾಧ್ಯಮಗಳ ಉಸ್ತುವಾರಿ ಶಾಮರಾವ ದೊಡ್ಡೆ ಸ್ವಾಗತಿಸಿ ವಂದಿಸಿದರು.