ನಿಸ್ವಾರ್ಥ ಸೇವೆಯೇ ನಿಜವಾದ ಪೂಜೆ

ಮಧುಗಿರಿ, ಜು. ೨೧- ನಿಸ್ವಾರ್ಥ ಸೇವೆಯೆ ನಿಜವಾದ ಪೂಜೆ ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಹನುಮಂತನಾಥಸ್ವಾಮಿಜಿ ಹೇಳಿದರು.
ತಾಲ್ಲೂಕಿನ ದೊಡ್ಡಯಲ್ಕುರು ಗ್ರಾಮದ ಬಡುನವರ ಕುಲದ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಪ್ರತಿ ಗ್ರಾಮಗಳ ದೇವಸ್ಥಾನಗಳು ಪುಣ್ಯ ಕ್ಷೇತ್ರಗಳಾಗಬೇಕು. ಅದೇ ರೀತಿ ಗ್ರಾಮಗಳ ಅಭಿವೃದ್ಧಿ ನಮ್ಮ ಆದ್ಯತೆಯಾಗಬೇಕು ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ದೇವಸ್ಥಾನಗಳು ಮತ್ತು ಜಾತ್ರಾ ಮಹೋತ್ಸವಗಳಿಂದ ಊರಿನ ಒಗ್ಗಟ್ಟು, ಧರ್ಮದ ಶಕ್ತಿಯನ್ನು ಪ್ರದರ್ಶಿಸಬಹುದು. ಧಾರ್ಮಿಕ ಭಾವನೆಗಳಲ್ಲಿ ನಮ್ಮ ದೇಶದ ನೆಲದ ಸಂಸ್ಕೃತಿಯನ್ನು ಪ್ರತಿಯೊಬ್ಬರು ಗೌರವಿಸುವುದು ಎಲ್ಲರ ಕರ್ತವ್ಯ. ಜಾತಿ, ಜಾತಿಗಳ ಮಧ್ಯೆ ವೈಮನಸ್ಸು ಸೃಷ್ಟಿಸಬಾರದು. ನಾವೆಲ್ಲ ಒಂದೇ ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕು. ನಮ್ಮಗಳ ಬದುಕಿಗೆ ಅರ್ಥಪೂರ್ಣವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಗ್ರಾಮಗಳಲ್ಲಿ ಸೌಹಾರ್ದತೆಯಿಂದ ಬಾಳನ್ನು ಕಟ್ಟಿಕೊಳ್ಳಬೇಕು. ಧರ್ಮದಿಂದ ಶಾಂತಿಯನ್ನು ಸಾರುವಂಥ ಆಗಬೇಕು ಹಳ್ಳಿಗಳಲ್ಲಿ ರಾಜಕೀಯ ಬರಬಾರದು. ದೇವಸ್ಥಾನಗಳಿಂದ ಮಾತ್ರ ನೆಮ್ಮದಿ ಮೂಡುತ್ತದೆ. ಪ್ರತಿ ಗ್ರಾಮಗಳಲ್ಲಿ ಒಂದು ಶಾಲೆ, ಒಂದು ದೇವಸ್ಥಾನಗಳ ಅವಶ್ಯಕತೆ ಇದೆ ಎಂದರು. ಈ ಸಂದರ್ಭದಲ್ಲಿ ಶಂಕರಪ್ಪ, ಶಿವಶಂಕರ್, ಗೋವಿಂದಪ್ಪ, ಮಧು, ರಾಜಣ್ಣ, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.