ನಿಸ್ವಾರ್ಥ ಸೇವೆಗೆ ಸಂದ ಗೌರವ

ಅಫಜಲಪುರ:ಎ.2: ತಾಲೂಕಿನ ಬಂದರವಾಡ ಗ್ರಾಮದ ಹಣಮಂತ ಬಮನಳ್ಳಿ ಇವರ ಸಮಾಜ ಸೇವೆ ಗುರುತಿಸಿ, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕನಕಶ್ರೀ ಪ್ರಕಾಶನ ಬ್ಯಾಕೂಡ್ ಸಂಸ್ಥೆಯ ವತಿಯಿಂದ ಕನ್ನಡ ರತ್ನ ರಾಜ್ಯ ಪ್ರಶಸ್ತಿ ನೀಡಿ, ಗೌರವಿಸಿದೆ. ಹಣಮಂತ ಬಮನಳ್ಳಿ ಅವರು ಸಮಾಜಮುಖಿ, ಸಮಾಜ ಸೇವೆ, ಮಾಡುವ ಮೂಲಕ ಗುರುತಿಸಿಕೊಂಡಿದ್ದು, ಅಲ್ಲದೆ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮತ್ತು ಇತರೆ ಸರಕಾರದ ಕಾರ್ಯಕ್ರಮಗಳಲ್ಲಿ ನಿಸ್ವಾರ್ಥಿಯಾಗಿ ತಮ್ಮದೆ ಆದ ಸೇವೆ ಸಲ್ಲಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಸಾರ್ವಜನಿಕ ಯಾವುದೇ ಸಭೆ, ಸಮಾರಂಭ, ಮದುವೆ ಇತರೆ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನ ಮಾಡದಿದ್ದರೂ, ಸ್ವ-ಇಚ್ಛೆಯಿಂದ ಹೋಗಿ, ಕಾರ್ಯಕ್ರಮಗಳ ಯಶಸ್ವಿಗಾಗಿ ಶ್ರಮಿಸುತ್ತಾರೆ.

ಹೀಗಾಗಿ ಅವರನ್ನು ಎಲ್ಲರೂ ಅಚ್ಚುಮೆಚ್ಚಿನಿಂದ ಕಾಣುತ್ತಾರೆ. ಹಣಮಂತ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಕಾಣದಿದ್ದರೆ, ಆ ಕಾರ್ಯಕ್ರಮಕ್ಕೆ ಅಷ್ಟೊಂದು ಕಳೆ ಮತ್ತು ಮೆರಗು ಬರುವುದಿಲ್ಲವೆಂದುಕೊಳ್ಳುತ್ತಾರೆ. ಅಲ್ಲದೆ ರೈತರ, ಕೃಷಿ ಕೂಲಿ ಕಾರ್ಮಿಕರ, ಬಡವರ ಇತರೆ ವರ್ಗಗಳ ಯಾವುದೇ ಕೆಲಸ, ಕಾರ್ಯಗಳು ಸರಕಾರಿ ಕಛೇರಿಗಳಲ್ಲಿ ಮಾಡಿಸಿಕೊಡುವ ಮೂಲಕ ಬೇಷ್ ಎನಿಸಿಕೊಂಡಿದ್ದಾರೆ. ಸದಾ ಸಂಘಜೀವಿ, ಶ್ರಮಜೀವಿ, ಸಮಾಜಮುಖಿಯಾದ ಇವರಿಗೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನಲ್ಲಿ ಕಳೆದ ಮಾರ್ಚ್ 7 ರಂದು ಅಖಿಲ ಕರ್ನಾಟಕ ಪ್ರಥಮ ಕವಿ ಸಮ್ಮೇಳನದಲ್ಲಿ ಕನ್ನಡ ರತ್ನ ರಾಜ್ಯ ಪ್ರಶಸ್ತಿ ನೀಡಿ, ಗೌರವಿಸಿದ್ದು, ಈ ಭಾಗದ ಜನರಲ್ಲಿ ಸಂತಸ ತಂದಿದೆ. ಇನ್ನೂ ಇವರ ಸೇವೆ ಸಮಾಜಕ್ಕೆ ಸಿಗಲಿ ಎಂದು ಹಲವಾರು ಜನ ಸಂಘ, ಸಂಸ್ಥೆಗಳ ಮುಖಂಡರು, ಅಭಿಮಾನಿಗಳು ಮತ್ತು ಗ್ರಾಮಸ್ಥರು ತಮ್ಮ ಹರ್ಷ ವ್ಯಕ್ತಪಡಿಸಿ ಸ್ವಾಗತಿಸಿದ್ದಾರೆ.