
(ಸಂಜೆವಾಣಿ ವಾರ್ತೆ)
ಕುಂದಗೋಳ ಆ14 : ಸ್ವಾರ್ಥ ಭಾವನೆಯನ್ನು ಯಾರು ಹೊರಹಾಕಿ ಸನ್ಮಾರ್ಗದಲ್ಲಿ ನಡೆಯುವರೋ ಅವರೇ ಸಮಾಜದಲ್ಲಿ ನಿಜವಾದ ಶರಣರು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಸಿ.ಶಾನವಾಡ ಹೇಳಿದರು.
ಅವರು ತಾಲೂಕಿನ ಹರ್ಲಾಪೂರದಲ್ಲಿ ಗ್ರಾ.ಪಂ. ಸಭಾಭವನದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು,ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುಟುಕು ಕಾವ್ಯಕ್ಕೆ 12ನೇ ಶತಮಾನದಿಂದ ಸುದೀರ್ಘ ಮಹತ್ವವಾದ ಇತಿಹಾಸವಿದೆ.ಇದು ಒಬ್ಬ ವ್ಯಕ್ತಿಯ ಮನಸ್ಸಿನಿಂದ ಹೊರ ಬರಬೇಕಾದರೆ ಅದಕ್ಕೆ ಸೂಕ್ತ ವೇದಿಕೆ ಸಿಗಬೇಕು. ಅಂದಾಗ ಮಾತ್ರ ಕನ್ನಡ ಸಾಹಿತ್ಯದ ಸತ್ವ ಕಳೆಗಟ್ಟುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಎಸ್.ಎಸ್.ಕೆಸರಳ್ಳಿ ಅನೇಕ ಶರಣರು ಆದರ್ಶವಾಗಿ ಜೀವನವನ್ನು ನಡೆಸಿ ನಮಗೆ ಕನ್ನಡ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ.ಅವರ ಮಾರ್ಗದರ್ಶನವನ್ನು ನಮ್ಮಜೀವನದಲ್ಲಿ ಅಳವಡಿಸಿಕೊಂಡು ಎಲ್ಲೆಡೆ ಕನ್ನಡ ಸಾಹಿತ್ಯದ ಸುಗಂಧವನ್ನು ಹರಡಬೇಕು ಎಂದು ಹೇಳಿದರು.
ತಾಲೂಕು ಶ.ಸಾ.ಪ.ಉಪಾಧ್ಯಕ್ಷ ರಾಘವೇಂದ್ರ ನರ್ತಿ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ದೃಷ್ಟಿಯಿಂದ ಪ್ರತಿ ತಿಂಗಳು ತಾಲೂಕಿನ ಎರಡು ಗ್ರಾಮಗಳಲ್ಲಿ ಕಾರ್ಯಕ್ರಮವನ್ನು ನಡೆಸಿ ಮಕ್ಕಳ ಕವನ ವಾಚನಗಳನ್ನು ತಿಳಿಯುವುದು ನಮ್ಮ ಸಾಹಿತ್ಯ ಪರಿಷತ್ತಿನ ಉದ್ದೇಶ ಎಂದರು.
ಈ ವೇಳೆ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವು ರಚಿಸಿದ ಕವನಗಳನ್ನು ವಾಚನ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಪವಿತ್ರಾ ಕೌದಿಮಠ,ಮಾಜಿ ಗ್ರಾಪಂ ಅಧ್ಯಕ್ಷ ರಾಮಣ್ಣ ಪೂಜಾರ, ತಾಲೂಕು ಚು.ಸಾ.ಪ.ಅಧ್ಯಕ್ಷ ವಾಯ್.ಡಿ.ಹೊಸೂರ,ಸಿದ್ದಲಿಂಗಪ್ಪ ಕರಿಯಮ್ಮನವರ, ಅಶೋಕ್ ರಾಟಿಮನಿ,ಹೊನ್ನಪ್ಪ ದೊಡ್ಡಮನಿ , ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತ್ತು ಪ್ರೌಡಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.