ನಿಸರ್ಗವನ್ನು ನಿರ್ಲಕ್ಷಿಸಿದರೆ ಅಪಾಯ ಗ್ಯಾರಂಟಿ

ಸಂಜೆವಾಣಿ ನ್ಯೂಸ್
ಮೈಸೂರು: ಜು.19:-ನಿಸರ್ಗದ ಜತೆಗೆ ನಮ್ಮ ಪೂರ್ವಜರು ಬದುಕನ್ನು ಏಕೀಕೃತಗೊಳಿಸಿ ಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಿಸರ್ಗವನ್ನು ಹಾಳು ಮಾಡಲಾಗುತ್ತಿದೆ ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಬೇಸರ ವ್ಯಕ್ತಪಡಿಸಿದರು.
ನಗರದ ಸರಸ್ವತಿ ಪುರಂನ ಜೆಎಸ್‍ಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ, ಸಾಹಿತ್ಯಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಿಸರ್ಗದಿಂದ ಮನುಷ್ಯರಿಗೆ ಸಾಕಷ್ಟು ಉಪಯೋಗವಿದೆ. ಅದನ್ನು ಅರಿತು ನಾವು ಕೂಡ ನಮ್ಮ ಪೂರ್ವಜರಂತೆ ಏಕೀಕೃತಗೊಂಡು ಪ್ರಕೃತಿಯೊಡನೆ ಸಾಗಿದರೆ ಮಾತ್ರ ಕಲೆ, ಸಾಹಿತ್ಯ ಎಲ್ಲವನ್ನು ಅನುಭವಿಸುತ್ತೇವೆ ಇವೆಲ್ಲವನ್ನು ಕಡೆಗಣಿಸಿದರೆ ಮನುಷ್ಯರಿಗೆ ಹೆಚ್ಚು ಅಪಾಯ ಎಂದರು.
ಇಂದಿನ ಪೀಳಿಗೆಗೆ ನಮ್ಮ ಪರಂಪರೆಯ ಬೇರಿನ ಪರಿಚಯವೇ ಇಲ್ಲದಾಗಿದೆ. ಕಾರು, ಬಂಗಲೆ ಏನೇ ಸಂಪತ್ತು ಇದ್ದರೂ, ಪರಂಪರೆಯ ಅರಿವು ಇಲ್ಲದಿದ್ದರೆ ಇವೆಲ್ಲವೂ ವ್ಯರ್ಥ. ನಮ್ಮ ಪರಂಪರೆಯನ್ನು ವಂಚಿಸಿ ಏನನ್ನೂ ಕಟ್ಟಲಾಗದು ಎಂದು ತಿಳಿಸಿದರು.
ನಿಸರ್ಗದಲ್ಲಿ ಪ್ರತಿಯೊಂದು ಜೀವಿಯೂ ತನ್ನದೇ ಆದ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿರುತ್ತದೆ. ಅದನ್ನು ಮನುಷ್ಯ ಕಲೆ, ಸಾಹಿತ್ಯದ ಮೂಲಕ ಅಭಿವ್ಯಕ್ತಿಸುತ್ತಾನೆ. ನಮ್ಮ ಸಂಗೀತ, ಕಲೆ, ಸಾಹಿತ್ಯ, ಪರಂಪರೆ ಗಗನದ ವ್ಯಾಪ್ತಿಗಿಂತ ದೊಡ್ಡದು. ಕಾಡು-ಮೇಡು, ವನ್ಯಜೀವಿಗಳು ಇರುವವರೆಗೂ ಮಾತ್ರ, ಈ ಭೂಮಿ ಮನುಷ್ಯನಿಗೆ ಆಶ್ರಯ ನೀಡಬಲ್ಲದು. ಹಾಗಾಗಿ, ಈ ಬಗ್ಗೆ ನಾವೆಲ್ಲರೂ ಭಾವನಾತ್ಮಕವಾಗಿ ಅವಲೋಕಿಸುವ ಅಗತ್ಯವಿದೆ ಎಂದು ನುಡಿದರು.
ನಮ್ಮ ಸಮಾಜದಲ್ಲಿ ಬದುಕು ಬೆಳಕಾಗಬೇಕು, ಬಯಲಾಗಬೇಕು ಅದೇ ಜೀವನ. ನಮ್ಮ ಬದುಕು ಹೂವಿನಂತಾಗಬೇಕು. ಜ್ಯೋತಿ ಜ್ಞಾನದ ಪ್ರತೀಕ ಅದನ್ನು ಉಳಿಸಿ, ಬೆಳಸಿಕೊಳ್ಳಬೇಕು. ವಚನಗಳು ನಮ್ಮ ಬದುಕಿನ ಬೆಳಕು, ವಿದ್ಯಾರ್ಥಿಗಳು ಸಾಧ್ಯವಾದಷ್ಟು ವಚನಗಳನ್ನು ಓದಬೇಕು. ವರ್ತಮಾನದಲ್ಲಿ ಬದುಕಬೇಕು. ಜೀವನದಲ್ಲಿ ಕಷ್ಟ ಪಟ್ಟರೆ ಮಾತ್ರ ಇಷ್ಟಪಟ್ಟದ್ದು ಈಡೇರುತ್ತದೆ ಕಿವಿ ಮಾತು ಹೇಳಿದರು.
ಏಕಲವ್ಯ ಪ್ರಶಸ್ತಿ ಪುರಸ್ಕೃತೆ, ಹಾಕಿ ಪಟು ನಿಲನ್ ಪೂಣಚ್ಚ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ, ಜ್ಞಾನವು ಕೂಡ ಹೆಚ್ಚಾಗಲಿದೆ. ನಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಎಂ.ಪಿ.ರಾಜೇಶ್ವರಿ ಪ್ರಾಸ್ತವಿಕವಾಗಿ ಮಾತನಾಡಿದರು. ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಪಿ.ಶಿವರಾಜು ಉಪನ್ಯಾಸಕರಾದ ಯೋಗೇಶ್ ಕುಮಾರ್, ಶಿವಕುಮಾರ್ ಸ್ವಾಮಿ, ಡಾ.ಎಂ.ಎಸ್.ಕೋಮಲಾ, ಎಚ್.ಬಿ.ಶ್ರೀಧರ್ ಮತ್ತಿತರರು ಇದ್ದರು.