ನಿಸರ್ಗದ ಸಂರಕ್ಷಣೆಯಿಂದ ಜೀವ ಸಂಕುಲದ ಉಳಿವು

ಕಲಬುರಗಿ:ಜು.28: ಪ್ರತಿಯೊಂದು ಜೀವಿಯು ಜನಿಸಿ, ಬೆಳವಣಿಗೆ ಹೊಂದಿ, ತನ್ನ ಜೀವನವನ್ನು ಸಾಗಿಸಬೇಕಾದರೆ ನಿಸರ್ಗ ಅತ್ಯಂತ ಅವಶ್ಯಕವಾಗಿದೆ. ಉತ್ತಮವಾದ ನಿಸರ್ಗ, ಪರಿಸರವಿದ್ದರೆ ಮಾತ್ರ ಎಲ್ಲಾ ಜೀವರಾಶಿಗಳು ಸದೃಢ ಮತ್ತು ದೀರ್ಘಕಾಲಿಕವಾಗಿ ಜೀವಿಸಲು ಸಾಧ್ಯವಾಗಿದೆ ಎಂದು ಉಪನ್ಯಾಸಕ, ಪರಿಸರವಾದಿ ಎಚ್.ಬಿ.ಪಾಟೀಲ ಅಭಿಮತ ವ್ಯಕ್ತಪಡಿಸಿದರು.

     ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ 'ಮುತ್ತಾ ಟ್ಯುಟೋರಿಯಲ್ಸ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ 'ವಿಶ್ವ ನೈಸರ್ಗಿಕ ಸಂರಕ್ಷಣೆ ದಿನಾಚರಣೆ'ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
  ಪರಿಸರದ ಅಸಮತೋಲನೆಯೇ ಕೋವಿಡ್‍ನಂತಹ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಮಾನವ ಪ್ರಕೃತಿ ವಿರುದ್ಧ ಹೋದರೆ ಅನಾಹುತ ತಪ್ಪಿದ್ದಲ್ಲವೆಂಬ ಸಂದೇಶ ನೀಡಿದೆ. ನಾವು ಸೇವಿಸುವ ಆಹಾರ, ನೀರು, ಗಾಳಿ ಅಶುದ್ಧವಾಗಿದೆ. ಎಲ್ಲೆಡೆ ಗಿಡಗಳನ್ನು ನೆಟ್ಟು ಪೋಷಿಸಬೇಕು. ಇಲ್ಲದಿದ್ದರೆ ಆಕ್ಸಿಜೆನ್ ಖರೀದಿಸುವ ಕಾಲ ದೂರಿಲ್ಲವೆಂದು ಎಚ್ಚರಿಸಿದರು.
   ಮಾನವ-ನಿಸರ್ಗದ ನಡುವಿನ ಸಂಬಂಧ ಕಾಪಾಡಬೇಕು. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಮಾನವ ನಿಸರ್ಗದ ಮೇಲೆ ಸವಾರಿ ಮಾಡಲು ಹೊರಟಿದ್ದಾನೆ. ಇದರಿಂದ ಅನೇಕ ಸಸ್ಯ ಮತ್ತು ಪ್ರಾಣಿಗಳು ನಾಶಹೊಂದಿವೆ ಮತ್ತು ಇನ್ನೂ ಕೆಲವು ಅಳಿವಿನಂಚಿನಲ್ಲಿವೆ. ಅಧಿಕ ಪ್ರಮಾಣದ ಕಾರ್ಬನ ಡೈಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್ ವಾತಾವರಣೆಕ್ಕೆ ಸೇರಿ, ಜಾಗತಿಕ ತಾಪಮಾನ ಉಂಟಾಗುತ್ತಿದೆ. ಅರಣ್ಯಗಳು ನಾಶಹೊಂದುತ್ತಿವೆ. ರಾಸಾಯನಿಕ ವಸ್ತುಗಳು, ಪ್ಲಾಸ್ಟಿಕ್, ಕ್ರ್ರಿಮಿ ಕೀಟನಾಶಕಗಳ ಬಳಕೆ ಬೇಡ. ಪರಿಸರ ಸಂರಕ್ಷಣೆ ಮಾಡಬೇಕೆಂದರು.
   ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಶಿಕ್ಷಕರಾದ ಲಕ್ಷ್ಮೀ, ಪ್ರೀಯಾಂಕಾ, ಪ್ರಮೋದ ಕುಲಕರ್ಣಿ, ಕಾಶಿಬಾಯಿ ಜಾಧವ, ಭೀಮಾಶಂಕರ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.