ನಿಷ್ಪಕ್ಷಪಾತ ತನಿಖೆ: ಬೊಮ್ಮಾಯಿ

ಬೆಂಗಳೂರು, ಮಾ.೨೭- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಆಡಿಯೋಗಳು ಧಾರಾವಾಹಿಯಂತೆ ಪ್ರತಿನಿತ್ಯ ಬರುತ್ತಿದ್ದು, ಎಸ್‌ಐಟಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೂಲಂಕುಷ ತನಿಖೆ ನಡೆಸುತ್ತದೆ ಎಂದು ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಯಾವುದೇ ಒತ್ತಡ ಪ್ರಭಾವಕ್ಕೆ ಒಳಗಾಗದೆ ಕ್ರಮಬದ್ಧವಾಗಿ ಕಾನೂನು ಪ್ರಕಾರ ನಿಷ್ಠೂರವಾಗಿ ಯಾರ ಪರ ವಿರೋಧವಿಲ್ಲದೆ ತನಿಖೆ ನಡೆಸುತ್ತಿದೆ ಎಂದರು.
ಎಸ್‌ಐಟಿ, ಸಿಡಿ, ಆಡಿಯೋ ಮತ್ತು ವಿಡಿಯೋ ಎಲ್ಲವನ್ನೂ ಇಟ್ಟುಕೊಂಡು ವೈಜ್ಞಾನಿಕವಾಗಿ ಕೂಲಂಕುಷ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ.
ಸಿಡಿ, ಆಡಿಯೋ ಮತ್ತು ವಿಡಿಯೋದಲ್ಲಿರುವ ಎಲ್ಲ ಅಂಶ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ತನಿಖೆ ಸಾಗಿದೆ. ತನಿಖೆ ದಿಕ್ಕು ತಪ್ಪುವ ಪ್ರಶ್ನೇಯೆ ಇಲ್ಲ. ಸತ್ಯಾಸತ್ಯತೆಯನ್ನು ಪತ್ತೆ ಹಚ್ಚುವ ತನಿಖೆ ಮುಂದುವರೆಯುತ್ತದೆ ಎಂದರು.
ಎಸ್‌ಐಟಿ ತನಿಖೆ ದಾರಿ ತಪ್ಪುವ ಪ್ರಶ್ನೆಯೇ ಇಲ್ಲ. ಅತ್ಯಂತ ನಿಷ್ಠೂರ ಹಾಗೂ ನ್ಯಾಯ ಸಮ್ಮತವಾಗಿ ತನಿಖೆ ನಡೆದಿದೆ ಎಂದರು.
ಸಂತ್ರಸ್ತ ಯುವತಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲದಿರುವ ಪ್ರಶ್ನೆ ಸೇರಿದಂತೆ ಯಾವುದೇ ಪ್ರಶ್ನೆಗಳಿಗೆ ಗೃಹಸಚಿವರು ಪ್ರತಿಕ್ರಿಯೆ ನೀಡದೆ ಈ ಬಗ್ಗೆ ಹೆಚ್ಚು ಮಾತನಾಡಲು ಬಯಸಲಿಲ್ಲ.