ಚಿತ್ರದುರ್ಗ.ಮಾರ್ಚ್29;ಚುನಾವಣಾ ಕಾರ್ಯದಲ್ಲಿ ಯಾವುದೇ ದೂರುಗಳು ಬಾರದಂತೆ, ನಿಷ್ಪಕ್ಷಪಾತ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಚುನಾವಣಾ ತರಬೇತಿ ನಿರ್ವಹಣಾ ಕೋಶದ ಅಡಿಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಚುನಾವಣಾ ಕರ್ತವ್ಯಗಳು, ಜವಾಬ್ದಾರಿಗಳು, ಚುನಾವಣಾ ಮಾದರಿ ನೀತಿ ಸಂಹಿತೆ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ವಿಶೇಷ ಜಾಗೃತದಳದ ಅಧಿಕಾರಿಗಳು, ಎಫ್‍ಎಸ್‍ಟಿ, ವಿಎಸ್‍ಟಿ, ವಿವಿಟಿ, ಎಂಸಿಸಿ ಮತ್ತು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸಹಾಯಕ ವೆಚ್ಚ ಉಸ್ತುವಾರಿ ಅಧಿಕಾರಿಗಳಿಗೆ ರಾಜ್ಯಸಂಪನ್ಮೂಲ ವ್ಯಕ್ತಿಗಳಿಂದ ಹಮ್ಮಿಕೊಂಡಿದ್ದ ಚುನಾವಣಾ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ, ನಿರ್ಭಿತಿಯಿಂದ ನಡೆಸಲು ಎಲ್ಲರೂ ಸಹಕರಿಸಿ, ತಮಗೆ ವಹಿಸಿದ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯನ್ನು ಯಾವುದೇ ಸಮಸ್ಯೆ ಇಲ್ಲದಂತೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಚುನಾವಣಾ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.
ಚುನಾವಣೆ ಕಾರ್ಯದಲ್ಲಿ ವಿವಿಧ ತಂಡಗಳ ಪಾತ್ರ ಏನು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಮುಕ್ತ, ನ್ಯಾಯಸಮ್ಮತ, ಗೊಂದಲವಿಲ್ಲದೆ, ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವಲ್ಲಿ ಮಾದರಿ ನೀತಿ ಸಂಹಿತೆ ಅನುಷ್ಠಾನ ತಂಡ ಪ್ರಮುಖವಾಗಿದೆ. ಇದರ ಅಡಿಯಲ್ಲಿ ಸಂಚಾರಿ ಹಾಗೂ ಸ್ಥಿರ ಕಣ್ಗಾವಲು ತಂಡಗಳು ಕಾರ್ಯನಿರ್ವಹಿಸುತ್ತವೆ. ಸಂಚಾರಿ ಹಾಗೂ ಸ್ಥಿರ ಕಣ್ಗಾವಲು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಸಿಆರ್‍ಪಿಸಿ 103 ಅಡಿ ಕಾರ್ಯನಿರ್ವಾಹಕ ದಂಡಾಧಿಕಾರಿಯ ಅಧಿಕಾರವನ್ನು ನೀಡಲಾಗಿದೆ. ಈ ಅಧಿಕಾರಿಗಳು ಚುನಾವಣಾ ಅಕ್ರಮಗಳು ಕಂಡುಬಂದರೆ, ಅವುಗಳನ್ನು ತಡೆಯಲು ಶೋಧನೆ ಹಾಗೂ ವಸ್ತುಗಳನ್ನು ಜಪ್ತಿ ಮಾಡಬಹದು. ಈ ಅಧಿಕಾರದ ಜೊತೆಗೆ ಜವಾಬ್ದಾರಿಯೂ ಇದೆ. ಮತದಾರರ ಓಲೈಕೆಗೆ ಕಾನೂನು ಬಾಹಿರವಾಗಿ ಹಣ, ವಸ್ತುಗಳನ್ನು ಹಂಚುವುದನ್ನು ತಡೆಯುವುದು ಹೆಚ್ಚು ಸವಾಲಿನ ಕೆಲಸವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 35 ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಿ ಹಣ, ಮದ್ಯ ಹಾಗೂ ಜನರಿಗೆ ಹಂಚಲು ತಂದ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.