ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆಯ ಸಾರ್ಥಕತೆ ಸಾಧ್ಯ

ಕಲಬುರಗಿ,ಮಾ.15: ಸರ್ಕಾರಿ ನೌಕರಿ ಪಡೆಯುವುದು, ದೀರ್ಘ ಕಾಲ ನೌಕರಿ ಮಾಡುವುದೇ ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ಅಂತಹ ಸೇವೆ ನಿಜಕ್ಕೂ ಸಾರ್ಥಕತೆ, ಆತ್ಮತೃಪ್ತಿ ಪಡೆಯಲು ಸಾಧ್ಯವಿದೆ ಎಂದು ನಿವೃತ್ತ ದೈಹಿಕ ಶಿಕ್ಷಕ ಶಿವಾನಂದ ಆರ್.ಹಿರೇಮಠ ಹೇಳಿದರು.
ಆಳಂದ ತಾಲೂಕಿನ ಸುಂಟನೂರ ಗ್ರಾಮದ ನೀಲಕಂಠಯ್ಯ ಹಿರೇಮಠ ಅವರ ಮನೆಯ ಪ್ರಾಂಗಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ವಯೋನಿವೃತ್ತಿ ಹೊಂದಿದ್ದ ಪ್ರಯುಕ್ತ ತಮಗೆ ಮಂಗಳವಾರ ಸಂಜೆ ದಂಪತಿ ಸಹಿತ ತಮಗೆ ಏರ್ಪಡಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಹಿರೇಮಠ ಅವರು ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರು ವರ್ಷ ಮತ್ತು ವಾಡಿ(ಜಂಕ್ಷನ್) ಸರ್ಕಾರಿ ಪ್ರೌಢಶಾಲೆಯಲ್ಲಿ 36 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ. ಒಂದೇ ಶಾಲೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸುವುದರ ಜೊತೆ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದಂತೆ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ದೇವರನ್ನು ಕಾಣುವ ಅಪರೂಪದ ಪ್ರವೃತ್ತಿ ಇವರದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಚ್.ಬಿ.ಪಾಟೀಲ, ವೇದಮೂರ್ತಿ ನೀಲಕಂಠಯ್ಯ ಹಿರೇಮಠ, ಶಿವಯೋಗಪ್ಪ ಬಿರಾದಾರ, ಅಣ್ಣಾರಾಯ ಎಚ್.ಮಂಗಾಣೆ, ಗುರುಲಿಂಗಯ್ಯ ಹಿರೇಮಠ, ಶೋಭಾ ಎಸ್.ಹಿರೇಮಠ, ಶಂಕ್ರೆಮ್ಮ ಎನ್.ಹಿರೇಮಠ, ಕಾವೇರಿ, ಶ್ರೀದೇವಿ, ಶ್ರೀಕಾಂತ, ಸುಪ್ರೀಯಾ, ನಯನಾ, ಶಿಲ್ಪಾರಾಣಿ, ಶ್ರೇಷ್ಠಾ, ಸಿಗುರೇಶ್, ಶ್ರಾವ್ಯ ಎಸ್.ಹಂಚಿನಾಳ ಸೇರಿದಂತೆ ಮತ್ತಿತರರಿದ್ದರು.