ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆಯ ಸಾರ್ಥಕತೆ

ಕಲಬುರಗಿ:ಎ.4: ಸರ್ಕಾರಿ ನೌಕರಿ ಪಡೆಯುವುದು, ದೀರ್ಘ ಕಾಲ ನೌಕರಿ ಮಾಡುವುದೇ ದೊಡ್ಡ ಸಾಧನೆಯಲ್ಲ. ಬದಲಿಗೆ ದೊರೆತ ಹುದ್ದೆಗೆ ಪ್ರಾಮಾಣಿಕತೆ, ನಿಷ್ಠೆ ಹಾಗೂ ಕರ್ತವ್ಯಬದ್ಧತೆಯಿಂದ ಸೇವೆ ಸಲ್ಲಿಸುವುದು ಮುಖ್ಯ. ಅಂತಹ ಸೇವೆ ನಿಜಕ್ಕೂ ಸಾರ್ಥಕತೆ, ಆತ್ಮತೃಪ್ತಿ ಪಡೆಯಲು ಸಾಧ್ಯವಿದೆ ಎಂದು ನಿವೃತ್ತ ಉಪನ್ಯಾಸಕ ನಾಗೇಶ ದೇಗಾಂವ ಅಭಿಮತಪಟ್ಟರು.

   ಮಹಾಗಾಂವ ಸರ್ಕಾರಿ ಪಿಯು ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಪ್ರಯುಕ್ತ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಮಂಗಳವಾರ ತಮಗೆ ಏರ್ಪಡಿಸಿದ್ದ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನವ್ನನು ಸ್ವೀಕರಿಸಿ ಅವರು ಮಾತನಾಡಿದರು.
   ಜೇವರ್ಗಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ದೇಗಾಂವ ಅವರು ಸುಧೀರ್ಘವಾದ 37.5 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿದ್ದಾರೆ. ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದಂತೆ ಆದರ್ಶವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸರಳ ಜೀವಿ, ಪ್ರಾಮಾಣಿಕತೆ ಇಡೀ ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು, ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಡಲು ಶ್ರಮಿಸಿದ್ದಾರೆ. ಅವರಲ್ಲಿರುವ ಶೈಕ್ಷಣಿಕ, ಸಾಮಾಜಿಕ ಕಾಳಜಿ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಮಂಗಲಾ ಎನ್.ದೇಗಾಂವ, ಶಿವಯೋಗಪ್ಪ ಬಿರಾದಾರ, ಬಸಯ್ಯಸ್ವಾಮಿ ಹೊದಲೂರ, ಇಸ್ಮೈಲ್ ಅತ್ತರ್, ಜೀನೇಂದ್ರ ಕ್ಷೀರಸಾಗರ, ಶ್ವೇತಾ ನೇತಿ, ಬಂಡೇಶ ಎನ್.ದೇಗಾಂವ, ಸುನೀಲ್ ಎನ್.ದೇಗಾಂವ ಸೇರಿದಂತೆ ಇನ್ನಿತರರಿದ್ದರು.