ನಿಷ್ಟಾವಂತರ ಕಾರ್ಯಕರ್ತರನ್ನು ಸಿಎಂಆರ್ ಕಡೆಗಣನೆ-ಕುರ್ಕಿ ರಾಜೇಶ್ವರಿ ಆರೋಪ

ಕೋಲಾರ,ಏ,೩-ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮೂಲ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡುತ್ತಾ ಇದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ನೇತೃತ್ವದಲ್ಲಿ ವೇಮಗಲ್ ಹೋಬಳಿ ಮಟ್ಟದ ಬೆಂಬಲಿಗರ ಸಭೆ ಭಾನುವಾರ ವೇಮಗಲ್ ನಲ್ಲಿ ನಡೆಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿ, ಸುಮಾರು ೧೯ ವರ್ಷದಿಂದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ ನಾನು ಯಾವತ್ತೂ ಅಧಿಕಾರಕ್ಕಾಗಿ ಅವಕಾಶಗಳಿಗಾಗಿ ಜೆಡಿಎಸ್ ಪಕ್ಷವನ್ನು ಬಳಕೆ ಮಾಡಿಕೊಂಡಿಲ್ಲ, ಇವತ್ತು ಪಕ್ಷವನ್ನು ಕಟ್ಟಿಕೊಂಡು ಬಂದಿರುವ ಮೂಲ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾ ಇಲ್ಲ, ಇವತ್ತಿನ ಜೆಡಿಎಸ್ ಅಭ್ಯರ್ಥಿ ಯಾರೋ ಬಂದು ಕಟ್ಟಿದ ಮನೆಯಲ್ಲಿ ಸೇರಿಕೊಂಡು ಅ ಮನೆಯಿಂದಲೇ ನಮ್ಮನ್ನು ದೂರ ಹಾಕಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಕೂಡ ನನ್ನ ತಂದೆಯ ಅಕಾಲಿಕ ಮರಣದ ನಂತರ ಜೆಡಿಎಸ್ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷರಾಗಿ, ತಾಲೂಕು ಅಧ್ಯಕ್ಷೆಯಾಗಿ ತನ್ನದೇ ಆದ ರೀತಿಯಲ್ಲಿ ಪಕ್ಷವನ್ನು ಉಳಿಸಿಕೊಂಡು ಬೆಳೆಸಿದ್ದೇವೆ, ಇವತ್ತು ಬಂದಿರುವ ಜೆಡಿಎಸ್ ಅಭ್ಯರ್ಥಿಗೆ ಅವರ ಮುಖಂಡರಿಂದ ಕನಿಷ್ಠ ನನ್ನ ಸ್ವಂತ ಊರು ಕುರ್ಕಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನವಿಲ್ಲ, ಅಲ್ಪಸಂಖ್ಯಾತರ ಸಮಾವೇಶದಲ್ಲಿ ಕುಮಾರಸ್ವಾಮಿ ದೇವೇಗೌಡರು ಪೋಟೋ ಇರುವ ಬ್ಯಾನರ್ ಗಳನ್ನು ಕಿತ್ತು ಬಿಸಾಕಿ ದೌರ್ಜನ್ಯ ಮಾಡಲು ಬರುತ್ತಾರೆ ನಮ್ಮ ಕಾರ್ಯಕರ್ತರಿಗೆ ಗೌರವವಿಲ್ಲ, ನಾವು ನಮ್ಮ ಕಷ್ಟಗಳನ್ನು ಯಾರ ಹತ್ತಿರ ಹೇಳಿಕೊಳ್ಳಬೇಕು, ನನಗೆ ಈ ರೀತಿಯಲ್ಲಿ ಆಗುತ್ತದೆ ಎಂದರೆ ಇನ್ನೂ ಸಾಮಾನ್ಯ ಕಾರ್ಯಕರ್ತರ ಬಗ್ಗೆ ಹೇಳಕ್ಕಾಗಲ್ಲ ನಮಗೆ ಏನು ಸ್ವಾಭಿಮಾನ ಇಲ್ಲ ಅಂದುಕೊಂಡಿದ್ದರಾ ಪಕ್ಷದಲ್ಲಿ ಉಳಿಯಲು ಅವರು ನಮಗೆ ಏನು ಗೌರವ ಅವಕಾಶಗಳು ಕೊಟ್ಟಿದ್ದಾರೆ ಹೇಳಲಿ ಎಂದು ಪ್ರಶ್ನಿಸಿದರು.
ಇವತ್ತು ಚುನಾವಣೆಯಲ್ಲಿ ಸಂದರ್ಭದಲ್ಲಿ ಯಾರನ್ನು ಬೇಕಾದರೂ ಸೋಲಿಸಲುಬಹುದು ಗೆಲ್ಲಿಸಲು ಬಹುದು ಇವತ್ತು ನನ್ನ ಮುಂದೆ ಮೂರು ಆಯ್ಕೆಗಳು ಇವೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ಹೋಗಬೇಕಾ ? ಜೆಡಿಎಸ್ ಪಕ್ಷದಲ್ಲಿಯೇ ಉಳಿಯಬೇಕಾ ? ಚುನಾವಣೆ ರಾಜಕೀಯ ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಲೇ ? ಎಂದು ಬೆಂಬಲಿಗರನ್ನು ಪ್ರಶ್ನಿಸಿದರು, ಮುಂದೆ ನರಸಾಪುರ, ವಕ್ಕಲೇರಿ ಹಾಗೂ ನಗರ ಭಾಗದ ಬೆಂಬಲಿಗರ ಸಭೆ ಮಾಡಿ ನನ್ನ ಹಿತೈಷಿಗಳೊಂದಿಗೆ ಚರ್ಚಿಸಿ ನಂತರ ನನ್ನ ತೀರ್ಮಾನ ಪ್ರಕಟಿಸುವುದಾಗಿ ಹೇಳಿದರು.
ವೇಮಗಲ್ ನವೀನ್ ಮಾತನಾಡಿ, ಪಂಚರತ್ನ ಯೋಜನೆಯ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿ ಹೋಗಿದ್ದಾರೆ, ಆವತ್ತಿನಿಂದ ನಿರಂತರವಾಗಿ ಜೆಡಿಎಸ್ ನಿಷ್ಠಾವಂತ ಮೂಲ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ, ಕುರ್ಕಿ ರಾಜೇಶ್ವರಿ ಯಾವುದೇ ತೀರ್ಮಾನ ತೆಗೆದುಕೊಂಡರು ನಾವು ಅವರೊಡನೆ ಇರುತ್ತೇವೆ ಎಂದರು.