
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.17: ನಗರದ ಕೈಗಾರಿಕಾ ಪ್ರದೇಶದಲ್ಲಿನ ಪ್ಲಾಸ್ಟಿಕ್ ಉತ್ಪಾದನಾ ಘಟಕಗಳ ಮೇಲೆ ನಿನ್ನೆ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು, ಪರಿಸರ ಇಂಜಿನೀಯರ್ ಗಳು ದಾಳಿ ಮಾಡಿ ಅಂದಾಜು ಆರೇಳು ಲಜ್ಷ ರೂ ಮೌಲ್ಯದ ಪ್ಲಾಸ್ಟಿಕ್ ಸಾಮಾಗ್ರಿ ವಶಕ್ಕೆ ಪಡೆದಿದ್ದಾರೆ.
ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಾಂಜಿನೇಯುಲು, ಸದಸ್ಯ ಮುಂಡ್ಲೂರು ಪ್ರಭಂಜನ್ ಕುಮಾರ್, ಪರಿಸರ ಇಂಜಿನೀಯರ್ ಶ್ರೀನಿವಾಸ್, ಆರೋಗ್ಯ ನಿರೀಕ್ಷಕರಾದ ಕುಮಾರ್, ಸುಮಾ ಸೇರಿ ಕೈಗಾರಿಕಾ ಪ್ರದೇಶದಲ್ಲಿನ ಪಾಟೀಲ್ ಪಾಲಿಮರ್ ಮತ್ತು ಪಾಟೀಲ್ ಪ್ಲಾಸ್ಟಿಕ್ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ರಾಜ್ಯ ಸರ್ಕಾರ ಈಗಾಗಲೇ ನಿಷೇಧಿಸಿರುವ 40 ಮೈಕ್ರಾನ್ ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ನ್ನು ಉತ್ಪಾದಿಸುತ್ತಿರುವುದು ಕಂಡು ಬಂದಿದೆ. ಅಲ್ಈಲಿ ಸಂಗ್ರಹಿಸಿದ್ದ 6 ರಿಂದ 7 ಲಕ್ಷ ರೂ. ಮೌಲ್ಯದ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ಮುಂಡ್ಲೂರು ಪ್ರಭಂಜನ್ ಕುಮಾರ್ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಘಟಕಗಳಿಗೆ ಈಗಾಗಲೇ ತಿಳಿಸಿದರೂ, ಮಾಲೀಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಹ ಘಟಕಗಳ ಮೇಲೆ ಕ್ರಮಕೈಗೊಳ್ಳುತ್ತಿಲ್ಲ. ಹಾಗಾಗಿ ಪಾಲಿಕೆಯಿಂದ ದಾಳಿ ಮಾಡಿದೆ.
ಘಟಕಗಳ ಮಾಲೀಕರಿಗೆ ಸದ್ಯ 3 ಲಕ್ಷ ರೂ. ದಂಡ ವಿಧಿಸಿ, ನೋಟೀಸ್ ನೀಡಿ ಎಚ್ಚರಿಸಲಾಗುವುದು. ಇದು ಪುನರಾವರ್ತನೆಯಾದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.