ನಿಷೇಧಿತ ಪ್ಲಾಸ್ಟಿಕ್ ಬಳಕೆ: ನಗರಸಭೆಯಿಂದ ವಿವಿಧೆಡೆ ದಾಳಿ

ಬೀದರ ನ 12: ಯಾವುದೇ ವ್ಯಕ್ತಿ, ಅಂಗಡಿ ಮಾರಾಟಗಾರ, ಸಗಟು ಮಾರಾಟಗಾರ ಅಥವಾ ಚಿಲ್ಲರೆ ವ್ಯಾಪಾರಿ ಮತ್ತು ಮಾರಾಟಗಾರರು, ಯಾವುದೇ ರೀತಿಯ ಪ್ಲಾಸ್ಟಿಕ್ ಹಾಳೆ ಹಾಗೂ ಪ್ಲಾಸ್ಟಿಕ್ ಮೈಕ್ರೋ ಗ್ರೇಡ್ಸ್ನಿಂದ ತಯಾರಾದಂತಹ ವಸ್ತುಗಳ ಬಳಕೆಯನ್ನು ರಾಜ್ಯಾದಾದ್ಯಂತ ನಿಷೇಧಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತರಾದ ರವೀಂದ್ರಕುಮಾರ ಅಂಗಡಿ ಅವರ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಇನ್ನೀತರ ಸಿಬ್ಬಂದಿಯಿಂದ ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ.
ನವೆಂಬರ್ 11ರಂದು ಗಣೇಶ ಮೈದಾನ ಮತ್ತು ಇನ್ನೀತರ ಕಡೆ ವಿವಿಧ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ಅಧಿಕಾರಿಗಳು, ನಿಷೇಧಿತ ಪ್ಲಾಸ್ಟಿಕ್ ಇರುವುದನ್ನು ದಾಳಿಯ ವೇಳೆಯಲ್ಲಿ ವಶಪಡಿಸಿಕೊಂಡರು.
ಬೀದರ ನಗರಸಭೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡಬಾರದು. ವ್ಯಾಪಾರ ಸ್ಥಳಗಳಲ್ಲಿ, ಅಂಗಡಿ, ಹೋಟೆಲ್, ಇತ್ಯಾದಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿದಲ್ಲಿ ಅಂತಹ ವ್ಯಾಪಾರಿ ಅಂಗಡಿ, ಹೋಟೆಲ್ ಇತ್ಯಾದಿಗಳನ್ನು ಉದ್ದಿಮೆ ಪರವಾನಿಗೆ ರದ್ದಪಡಿಸಲಾಗುವುದು ಹಾಗೂ ದಂಡ ವಿಧಿಸುವುದರ ಜೊತೆಗೆ ಅಂತಹ ವ್ಯಾಪಾರ, ವಾಣಿಜ್ಯ ಸ್ಥಳಗಳನ್ನು ಶಾಶ್ವತವಾಗಿ ಮುಚ್ಚಲಾಗುವುದು.
ಯಾವುದೇ ಕೈಗಾರಿಕೆ ಅಥವಾ ವ್ಯಕ್ತಿ ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಪ್ಲೆಕ್ಸ್ ಬಾವುಟ, ತಟ್ಟೆ, ಕ್ಯಾರಿಬ್ಯಾಗ್, ಚಮಚ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮಲುಕ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೇಡ್ಸ್ನಿಂದ ತಯಾರಾದಂತಹ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಗೆ ಮಾರಾಟ ಮತ್ತು ವಿತರಣೆ ಮಾಡುವುದನ್ನು ನಿಷೇಧಿಸಿದೆ.
ಆದಾಗ್ಯೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡು ಬಂದಲ್ಲಿ ಅಂತವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಇದೆ ವೇಳೆ ಎಚ್ಚರಿಕೆ ನೀಡಿದರು.