ನಿವೇಶನ ಸರ್ವೆಗೆ ಒತ್ತಾಯಿಸಿ ಪ್ರತಿಭಟನೆ

ಕೋಲಾರ,ನ.೩೦: ತಾಲ್ಲೂಕಿನ ಮಲ್ಲಪ್ಪನಪಾಳ್ಯ ಗ್ರಾಮದ ಬಡವರ ನಿವೇಶನಕ್ಕೆ ಮಂಜೂರಾಗಿರುವ ಜಾಗವನ್ನು ಸರ್ವೇ ಮಾಡಿಸಿ ಗುರುತಿಸಿಕೊಡಬೇಕು ಎಂದು ಒತ್ತಾಯಿಸಿ ಮಲ್ಲಪ್ಪನಪಾಳ್ಯ ಗ್ರಾಮಸ್ಥರು ನಗರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹೂವಳ್ಳಿ ಗ್ರಾಮಸ್ಥ ನಾಗೇಶ್ ಮಾತನಾಡಿ, ತಾಲ್ಲೂಕಿನ ಅರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಪ್ಪನಪಾಳ್ಯ ಗ್ರಾಮಕ್ಕೆ ಸೇರಿರುವ ೨ ಎಕರೆ ೨೦ ಗುಂಟೆ ಜಾಗವನ್ನು ಕೆಲ ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ಜಾಗವನ್ನು ಸರ್ವೇ ಮಾಡಿ ಬಡವರಿಗೆ ನಿವೇಶನಗಳಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಭಾವಿ ವ್ಯಕ್ತಿಗಳು ಸದರಿ ಜಾಗಕ್ಕೆ ಸಂಬಂಧಿಸಿದಂತೆ ಅರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ದಾಖಲೆಗಳನ್ನು ತಿದ್ದುಪಡಿ ಮಾಡಿ ವಶಕ್ಕೆ ಪಡೆಯಲು ಮುಂದಾದರು. ಇದರ ಮಾಹಿತಿ ತಿಳಿಸಿದ ಗ್ರಾಮಸ್ಥರು ಜಾಗವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಬಡವರಿಗೆ ಹಂಚಿಕೆ ಮಾಡಲು ಮನವಿ ನೀಡಲಾಗಿತ್ತು. ಆದರೆ ಅಧಿಕಾರಿಗಳು ಒತ್ತಡಗಳಿಗೆ ಮಣಿದು ಮೌನವಹಿಸುತ್ತಿದ್ದಾರೆ ಎಂದು ದೂರಿದರು.
ಗ್ರಾಮಸ್ಥರಾದ ಎಂ.ಮಂಜುನಾಥ್, ಮುನಿರತಮ್ಮ, ಮುನಿಆಂಜಿನಪ್ಪ, ವೆಂಕಟೇಶಪ್ಪ, ಸಂಪತ್‌ಕುಮಾರ್, ಲಕ್ಷ್ಮಮ್ಮ, ರತ್ನಯ್ಯ, ಶಂಕರ್, ಎಚ್.ಎಂ.ಮುನಿವೆಂಕಟಪ್ಪ ಪಾಲ್ಗೊಂಡಿದ್ದರು.