ನಿವೇಶನ, ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ

ಜಗಳೂರು.ನ.೧೭; ಪಟ್ಟಣದ ಜೋಗಪ್ಪನ ಗುಡಿ ಹಿಂಭಾಗದ ನಿರಾಶ್ರಿತರಿಗೆ ನಿವೇಶನ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ಜೋಗಪ್ಪನ ಗುಡಿಯ ಹಿಂಭಾಗ 5ನೇ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸಂತೋಷ್‌ಕುಮಾರ್  ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ತಾಲ್ಲೂಕು ಕಛೇರಿಗೆ ಆಗಮಿಸಿದ ನಿರಾಶ್ರಿತರು ಮನವಿ ಸಲ್ಲಿಸಿ ಮುಖಂಡ ಬಿ.ಲೋಕೇಶ್ ಮಾತನಾಡಿ ಹಲವು ವರ್ಷಗಳಿಂದಲೂ ಗುಡಿಸಲು ಹಾಕಿಕೊಂಡು ಬದುಕುವ ಈ ದಲಿತ ಕುಟುಂಬಗಳಿಗೆ ಸರ್ಕಾರ ಒಂದು ನಿವೇಶನ, ಅಥವಾ ಮನೆ ನೀಡಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕೆರೆಯ ನೀರು ಮನೆಗಳಿಗೆ ನುಗ್ಗಿ ಜಲಾವೃತಗೊಂಡಿದ್ದು, ಎಲ್ಲರು ಬೀದಿಗೆ ಬಿದಿದ್ದಾರೆ. ಮನೆಗಳು ಜಲಾವೃತಗೊಂಡಿದ್ದ ಸಮಯದಲ್ಲಿ ತಾಲ್ಲೂಕಾಡಳಿತ 30 ದಿನಗಳ ಮಟ್ಟಿಗೆ ಕಾಳಜಿ ಕೇಂದ್ರ ತೆರೆದಿತ್ತು. ಆದರೆ ಈಗ ಬಸ್ ನಿಲ್ದಾಣದಲ್ಲಿ 3 ಕೊಠಡಿಗಳನ್ನು ನೀಡಿ ಅಲ್ಲಿ ಯಾವ ಸೌಲಭ್ಯವೂ ಕೂಡ ಇರುವುದಿಲ್ಲ.ಇತ್ತ ಕಡೆ ಶಾಸಕರಾಗಲೀ, ಪಟ್ಟಣ ಸದಸ್ಯರಾಗಲೀ ಇತ್ತ ಕಡೆ ತಿರುಗಿಯೂ ಸಹ ನೋಡದೇ ತೀವ್ರ ನಿರ್ಲಕ್ಷೆ ವಹಿಸುತ್ತಿದ್ದಾರೆ. ಇಲ್ಲಿ ವಾಸಿಸುವ ನಾವುಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದೂಳಿದ ಜಾತಿ ಸ್ತರದಲ್ಲಿ ಕೆಳ ಸ್ತರದಲ್ಲಿ ನಾವುಗಳು ಮಾನವರಾಗಿ ಹುಟ್ಟಿರುವುದೇ ಪರಮ ಪಾಪವಾಗಿ ಬಿಟ್ಟಿದೆ. ನಾವುಗಳು ಒಂದು ತುತ್ತಿನ ಊಟಕ್ಕಾಗಿ ಹಗಲು ಇರುಳು ಊರು ತಿರುಗಿ ಕೆಲಸ ಮಾಡಿಕೊಂಡು ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ನಮಗೆ ಎಲ್ಲಿಯು ಒಂದು ಗೇಣು ಜಮೀನು ಇರುವುದಿಲ್ಲ. ಆದರೂ ನಾವುಗಳು ಕೂಲಿ ಮಾಡಿ ಜೀವನ ಸಾಗಿಸುತ್ತಾ ಬಂದಿದ್ದೇವೆ. ಜೋಗಪ್ಪನ ಗುಡಿಯ ಕೆರೆಯಂಗಳದಲ್ಲಿ ಸುಮಾರು 30 ವರ್ಷಗಳಿಂದ 30 ಕುಟುಂಬಗಳ ಗಂಡ ಹೆಂಡತಿ ಮತ್ತು ಮಕ್ಕಳು ವಾಸ ಮಾಡುತ್ತಾ ಬರುತ್ತಿದ್ದೇವೆ. ನಮಗೆ ಸರ್ಕಾರದಿಂದ ಒಂದು ಅಕ್ಕಿ ಕಾರ್ಡ್, ಆಧಾರ್‌ಕಾರ್ಡ್ ಮತ್ತು ಚುನಾವಣೆ ಗುರುತಿನ ಚೀಟಿ ನಮಗೆ ಇದುವರೆಗೆ ಯಾವ ಸೌಲಭ್ಯ ಸಿಕ್ಕಿರುವುದಿಲ್ಲ. ನಮ್ಮಲ್ಲಿ ಚುನಾವಣೆ ಕಾರ್ಡುಗಳು ಇರುವ ಒಂದೇ ಒಂದು ಕಾರಣಕ್ಕೆ ನಮ್ಮಲ್ಲಿ ಚುನಾವಣೆ ಸಂದರ್ಭದಲ್ಲಿ ನಮ್ಮ ಜೋಗಪ್ಪನ ಗುಡಿ ಕೆರೆ ಅಂಗಳದಲ್ಲಿ ವಾಸ ಮಾಡುವ ನಮ್ಮ ಕುಟುಂಬಗಳಿಗೆ ಚುನಾವಣೆ ಬಂದಾಗ ಜನ ಪ್ರತಿನಿಧಿಗಳು ಆಗಮಿಸಿ ನಮಗೆ ಆ ಸಂದರ್ಭದಲ್ಲಿ ನಿಮಗೆ ನಿವೇಶನ ಕೊಡುತ್ತೀವಿ, ಮನೆ ಕಟ್ಟಿ ಕೊಡುತ್ತೀವಿ ಅಂತ ಹೇಳಿ ನಮ್ಮಗಳ ಮತ ಪಡೆದು ಗೆದ್ದು ಹೋದವರು ಮತ್ತೇ ತಿರುಗಿ ನೋಡುವುದಿಲ್ಲ.2015ರಲ್ಲಿ ಕೆರೆ ಅಂಗಳದಲ್ಲಿ  ಒತ್ತುವರಿ ನೆಪದಲ್ಲಿ ಅಧಿಕಾರಿಗಳು ನಮ್ಮಗಳನ್ನು ಒಕ್ಕಲೆಬ್ಬಿಸಿ ನಿಮಗೆ ನಿವೇಶನ ಮನೆ ಎರಡನ್ನು ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಅಂದಿನ ಶಾಸಕರು ಸುಮಾರು 40 ಕುಟುಂಬಗಳಿಗೆ ಸೈಟ್‌ಗಳನ್ನು ನೀಡುತ್ತಿದ್ದೇವೆ ಎಂದು ಜಾಗ ಗುರುತಿಸಿ ಅವರಿಗೆ ಹಕ್ಕು ಪತ್ರ ನೀಡಲು ತಯಾರು ನಡೆದಿತ್ತು ಆದರೆ ಸರ್ಕಾರ ಬದಲಾವಣೆ ನಂತರ 5 ವರ್ಷಗಳು ಕಳೆದರೂ ನಮಗೆ  ಸೂರು ಇಲ್ಲ, ಇತ್ತ  ನೆಲೆಯಿಲ್ಲದಂತಾಗಿದೆ.ನಮ್ಮ ಪ್ರತಿಭಟನೆಗೆ ಸ್ಪಂದಿಸದಿದ್ದರೆ  ಮುಖ್ಯಮಂತ್ರಿಗಳು ಆಗಮಿಸುವ ಜನಸಂಕಲ್ಪ ಯಾತ್ರೆಯಲ್ಲಿ ಕಪ್ಪುಪಟ್ಟಿ ಪ್ರದರ್ಶನ ನಡೆಸಿ ಮುಖ್ಯಮಂತ್ರಿಗಳಿಗೆ ಧಿಕ್ಕಾರ ಕೂಗಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ನಾಗಮ್ಮ, ಸಾಕಮ್ಮ, ಸಿರಿಶ್ಯಾ, ಸಂತೋಷ್, ವೆಂಕಟೇಶ್, ಮೀನಾಕ್ಷಮ್ಮ,ಮಂಜಮ್ಮ, ತಿಮ್ಮಕ್ಕ, ಜಯಲಕ್ಷಿ, ಹುಲಿಗಮ್ಮ, ಲಕ್ಷ್ಮಿ. ಗೌರಮ್ಮ, ಶಿವಮ್ಮ, ಕೊಲಮ್ಮ, ತಿಪ್ಪಕ್ಕ, ಹೊನ್ನಮ್ಮ, ಕಾವ್ಯ, ಲಕ್ಷ್ಮಿ , ಸಣ್ಣತಿಪ್ಪಕ್ಕ ಇತರರಿದ್ದರು.