ನಿವೇಶನ ವಸತಿಗಾಗಿ ಪುರಸಭೆಗೆ ಮುತ್ತಿಗೆ ಹೋರಾಟ

ಮಾನ್ವಿ,ಮಾ.೦೯- ಪಟ್ಟಣ ಪ್ರದೇಶದ ವಿವಿಧ ಭಾಗದಲ್ಲಿ ವಾಸಮಾಡುತ್ತಿರುವ ದೀನ ದಲಿತರು, ಹಿಂದುಳಿದ ಅಲ್ಪಸಂಖ್ಯಾತರ, ನಿರ್ಗತಿಕರು, ಬಾಲ ಕಾರ್ಮಿಕರು, ಕೂಲಿ ಕಾರ್ಮಿಕರಿಗೆ ಪುರಸಭೆ ಹಾಗೂ ತಾಲೂಕ ಆಡಳಿತ ಕೂಡಲೇ ಅವರನ್ನು ಗುರುತಿಸಿ ವಿಶೇಷ ಘಟಕದಡಿಯಲ್ಲಿ ಅವರಿಗೆ ವಸತಿ ಹಾಗೂ ನಿವೇಶನವನ್ನು ನೀಡುವಂತೆ ಆಗ್ರಹಿಸಿ ಪುರಸಭೆ ಹಾಗೂ ತಾಲೂಕ ಆಡಳಿತ ಕಛೇರಿಯ ಮುಂಭಾಗದಲ್ಲಿ ದಲಿತ ಸಮರಸೇನೆ ಸ್ಲಂ ಜನರ ಕ್ರಿಯಾ ವೇದಿಕೆ ಸಂಘಟನೆಯಿಂದ ಉಗ್ರ ಸ್ವರೂಪದ ಮುತ್ತಿಗೆ ಹೋರಾಟದ ಮೂಲಕ ಮನವಿ ಪತ್ರವನ್ನು ನೀಡಿದರು.
ನಂತರ ಸಂಘಟನೆಯ ಜಿಲ್ಲಾಧ್ಯಕ್ಷ ಅನೀಲ ನೀಲಕಂಠ ಮಾತಾನಾಡಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕನಿಷ್ಠ ನೂರಕ್ಕೂ ಅಧಿಕ ಕುಟುಂಬಸ್ಥರು ಸುಮಾರು ೪೫-೫೦ ವರ್ಷಗಳಿಂದ ಬೀದಿ ಬದಿಯಲ್ಲಿ ಅಥಾವ ಕೊಳಕು ಸ್ಥಿತಿಯಲ್ಲಿರುವ ಸ್ಥಳಗಳಲ್ಲಿ ವಾಸ ಮಾಡುತ್ತಿದ್ದಾರೆ. ಪ್ರಮುಖವಾಗಿ ಅನೇಕ ಸ್ಲಂ ನಿವಾಸಿಗಳು ವಾಸವಾಗಿರುವ ಜನರಿಗೆ ಮೂಲಭೂತ ಸೌಕರ್ಯಗಳಾದ ವಸತಿ, ನಿವೇಶನ, ರಸ್ತೆ, ಚರಂಡಿ, ಬಾಲ ಕಾರ್ಮಿಕ ಪದ್ದತಿ, ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದು ಇವೆಲ್ಲವೂ ಸೇರಿದಂತೆ ಒಟ್ಟಾರೆಯಾಗಿ ಅವರ ಜೀವನವೇ ಒಂದು ನರಕದಂತಾಗಿದೆ ಇದಕ್ಕೆ ಕಾರಣ ಅವರು ವಾಸಮಾಡುತ್ತಿರುವ ಸ್ಥಳ ಅದಕ್ಕಾಗಿ ಕೂಡಲೇ ಪುರಸಭೆ ಅಧಿಕಾರಿಗಳು, ತಾಲೂಕ ದಂಡಧಿಕಾರಿಗಳು, ಅವರಿಗೆ ಕೂಡಲೇ ವಿಶೇಷ ಅನುದಾನದಡಿಯಲ್ಲಿ ವಸತಿ,ನಿವೇಶನ ನೀಡಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ದೊಡ್ಡ ಪ್ರಮಾಣದ ಹೋರಾಟವನ್ನು ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಪುರಸಭೆ ಅಧಿಕಾರಿ ಗಂಗಾಧರ, ಉಪ ದಂಡಧಿಕಾರಿ ಅಬ್ದುಲ್ ವಾಹಿದ್ ಮನವಿ ಪತ್ರ ಸ್ವೀಕರಿಸಿದ ಮಾತಾನಾಡಿದ ಅವರು ನಿಮ್ಮ ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಅದಷ್ಟು ಕೂಡಲೇ ಈ ಸಮಸ್ಯೆಗಳಿಗೆ ಮುಕ್ತಿಯನ್ನು ನೀಡೋಣ ಎನ್ನುವ ಭರವಸೆಯನ್ನು ನೀಡಿದ ನಂತರ ಮುತ್ತಿಗೆ ಹೋರಾಟವನ್ನು ಕೈಬಿಡಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಅನೀಲಕುಮಾರ್, ಕರಿಯಪ್ಪ, ಶಿವಬಸಮ್ಮ ಸೇರಿದಂತೆ ವಿವಿಧ ಸ್ಲಂ ನಿವಾಸಿಗಳು ನೂರಾರು ಜನಸಂಖ್ಯೆಯಲ್ಲಿದ್ದರು.