ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು,ಆ.೦೩- ನಿವೇಶನ ಮಂಜೂರಿಯಾದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಮುಖಂಡರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಿಎಂಎವೈ ಯೋಜನೆಯ ಫಲಾನುಭವಿಗಳಿಗೆ ಎಸ್.ಎಫ್.ಸಿ ಅನುದಾನದ ಎಸ್.ಸಿ.ಪಿ ಟಿ.ಎಸ್.ಪಿ ಯೋಜನೆಯಲ್ಲಿ ವಂತಿಕೆ ಹಣ ಮಂಜೂರಿ ಮಾಡಬೇಕು.ನಗರದ ವಿವಿಧ ಸ್ಲಂ ಗಳಲ್ಲಿ ಬಡಕೂಲಿ ಕಾರ್ಮಿಕರು ನಿವೇಶನ ಇಲ್ಲದೆ ಬೀದಿ ಬದಿ,ಟೆಂಟ್‌ಗಳಲ್ಲಿ,ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ.
೨೦೧೫-೧೬ ರಿಂದ ಹೋರಾಟದ ಫಲವಾಗಿ ವಾಜಪೇಯಿ ನಿವೇಶನ ಯೋಜನೆಯಲ್ಲಿ ೯೬೦ ನಿವೇಶನ ರಹಿತರಿಗೆ ನಿವೇಶನಕ್ಕಾಗಿ ೨೦೧೮ ರಲ್ಲಿ ಭೂಮಿ ಮಂಜೂರಾಗಿದೆ.ಜಿಲ್ಲಾಡಳಿತ ಮತ್ತು ನಗರಸಭೆಯವರು ನಿವೇಶನ ಹಕ್ಕುಪತ್ರ ಹಂಚಿಕೆ ಕೂಡ ಮಾಡಿದ್ದಾರೆ. ಹಕ್ಕುಪತ್ರ ಹಂಚಿಕೆ ಮಾಡಿ ಐದು ವರ್ಷಗಳು ಗತಿಸಿದರು .ಇದುವರೆಗೂ ನಿವೇಶನ ಹಂಚಿಕೆಯಾಗಿಲ್ಲ ಎಂದು ದೂರಿದರು.ನಿವೇಶನ ರಹಿತರಿಗೆ ಮಂಜೂರಾದ ಭೂಮಿಯನ್ನು ಜನಪ್ರತಿನಿಧಿಗಳು ಕಬಳಿಸಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ.ಇದರಿಂದ ನಿವೇಶನ ಪಡೆದ ಫಲಾನುಭವಿಗಳು ವಂಚನೆಗೊಳಗಾಗುತ್ತಾರೆ.
ಇದಕ್ಕೆಲ್ಲ ಜಿಲ್ಲಾಡಳಿತ ಮತ್ತು ನಗರಸಭೆಯವರ ವಿಳಂಬವೆ ಕಾರಣ. ನಿವೇಶನ ರಹಿತರಿಗೆ ಮಂಜೂರಿಯಾದ ಸರ್ವೆ ನಂ : ೯೨೯/೨ , ೭೨೬ , ೭೨೭ ಮತ್ತು ೫೮೧ ಭೂಮಿಯನ್ನು ಸರ್ವೆ ಮಾಡಿ ಹದ್ದುಬಸ್ತ್ ಮಾಡಿಕೊಡಲು ಕಂದಾಯ ಇಲಾಖೆಯ ತಹಶೀಲದಾರರಿಗೆ ಹಲವಾರು ಸಲ ಮನವಿ ಮಾಡಿದರೂ ಇದುವರೆಗೂ ಕ್ರಮ ಕೈಗೊಳ್ಳದೆ ನಿರ್ಲಕ್ಷವಹಿಸಿದ್ದಾರೆ ಎಂದು ಆರೋಪಿಸಿದರು.
ಸರಕಾರದ ಆದೇಶ ಪ್ರಕಾರ ಪಿಎಂಎವೈ ಯೋಜನೆಯ ಪರಿಶಿಷ್ಟ ಜಾತಿ ಮರುಬ್ಬ ಪಂಗಡದ ಜನರಿಗೆ ಎಸ್.ಎಫ್.ಪಿ ಮುಕ್ತನಿಧಿಯ ಎಸ್.ಸಿ. ಪಿ / ಟಿ.ಎಸ್.ಪಿ ಯೋಜನೆಯಲ್ಲಿ ವಂತಿಕೆ ಹಣ ಮಂಜೂರು ಮಾಡಲು ಆದೇಶಿಸಿದರು.
ನಗರಸಭೆಯ ಪೌರಾಯುಕ್ತರು ಕ್ರಿಯಾ ಯೋಜನೆ ರೂಪಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ.೧೫ ದಿವಸದೊಳಗೆ ಸರ್ವೆ ನಂ : ೯೨೯/೨ , ೭೨೬ , ೭೨೭ ಮತ್ತು ೫೮೧ ಭೂಮಿಯನ್ನು ಸರ್ವೆ ಮಾಡಿ ಹದ್ದುಬಸ್ತ್ ಮಾಡಿ ನಿವೇಶನ ಅಭಿವೃದ್ಧಿಪಡಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಬೇಕು ಮತ್ತು ಪಿ.ಎಂ.ಎ.ವೈ ಯೋಜನೆಯ ಫಲಾನುಭವಿಗಳ ವಂತಿಕೆ ಹಣವನ್ನು ನಗರಸಭೆಯ ಎಸ್.ಎಫ್.ಸಿ ಮುಕ್ತನಿದಿಯಿಂದ ಮಂಜೂರು ಮಾಡಬೇಕು .ಇಲ್ಲದಿದ್ದರೆ ಜಿಲ್ಲಾಡಳಿತ ಮತ್ತು ನಗರಸಭೆ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜನಾರ್ದನ ಹಳ್ಳಿಬೆಂಚಿ,ಬಸವರಾಜ ಹೊಸೂರು,ನೂರ್ ಜಾನ್,ವೀರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.