ನಿವೇಶನದ ಅಕ್ರಮ ಆಸ್ತಿಗಳನ್ನು ಸಕ್ರಮಗೊಳಿಸಲು ಆದ್ಯತೆ

ಬ್ಯಾಡಗಿ, ಏ 17: ಜಿಲ್ಲೆಯಲ್ಲಿ ಬ್ಯಾಡಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ ಎಲ್ಲ ಜಮೀನು, ನಿವೇಶನದ ಅಕ್ರಮ ಆಸ್ತಿಗಳನ್ನು ಸಕ್ರಮಗೊಳಿಸಲು ತಾವು ಹೆಚ್ಚಿನ ಆದ್ಯತೆಯನ್ನು ನೀಡುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಅಕ್ರಮ-ಸಕ್ರಮ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿರುವ ಫಲಾನುಭವಿಗಳ ಕುರಿತು ಪರಿಶೀಲನೆ ನಡೆಸಿ ಅಲ್ಲಿನ ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಅವರಿಗೆ ಹಕ್ಕು ಪತ್ರವನ್ನು ನೀಡಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ. ತಮ್ಮ ಅಧಿಕಾರದ ಅವಧಿಯಲ್ಲಿ ಅರ್ಹ ಬಡಜನರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಆಸ್ತಿಗಳನ್ನು ಸಕ್ರಮಗೊಳಿಸಲು ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತ್ವರಿತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಒತ್ತುವರಿಗೊಂಡಿರುವ ಸರ್ಕಾರಿ ಆಸ್ತಿಗಳನ್ನು ಸಕ್ರಮಗೊಳಿಸುವ ಕಾರ್ಯದಲ್ಲಿ ಸರ್ವೇ ಇಲಾಖೆಯ ಪಾತ್ರ ಬಹು ಮುಖ್ಯವಾಗಿದ್ದು, ಕೂಡಲೇ ಸರ್ವೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಘಾಳಪೂಜಿ, ಗುಡ್ಡದ ಮಲ್ಲಾಪುರ, ಕಲ್ಲೆದೇವರು, ಮೊಟೇಬೆನ್ನೂರ, ಕೆಂಗೊಂಡ, ಬಿಸಲಹಳ್ಳಿ, ಶಿಡೇನೂರ, ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ ಜಮೀನುಗಳನ್ನು ಗ್ರಾಮ ಲೆಕ್ಕಾಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಲು ಮುಂದಾಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸಿದ್ಧಲಿಂಗಯ್ಯ ಪಾಟೀಲ, ಸುರೇಶ ಕಳ್ಳಿಮನಿ, ತಹಶೀಲ್ದಾರ ರವಿಕುಮಾರ ಕೊರವರ, ಶಿರಸ್ತೆದಾರ ಆರ್.ಬಿ.ಬಂಕಾಪುರ, ಕಂದಾಯ ನಿರೀಕ್ಷಕ ಆರ್.ಸಿ.ದ್ಯಾಮನಗೌಡ್ರ, ಆರ್.ಎ.ಕುಲಕರ್ಣಿ, ಪಿ.ಎಂ.ಕುಸಗೂರ, ಗ್ರಾಮ ಲೆಕ್ಕಾಧಿಕಾರಿಗಳಾದ ಶೋಭಾ ಹುಣಸಿಮರದ, ಹೇಮಾ ಗಳಗನಾಥ, ಬಿ.ಎನ್.ಖವಾಸ್, ಹಾಲೇಶ ಹೂಗಾರ, ಮುಸ್ಕಾನ್ ಹೊಳಲ, ರಂಗಪ್ಪಗೌಡ್ರ, ಹಾಗೂ ಆಶ್ರಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.