ನಿವೃತ್ತ ಸೈನಿಕನ ಮೇಲೆ ಹಲ್ಲೆ: ಆರೋಪಿಗಳ ಬಂಧನ

ಕಲಬುರಗಿ:ಮಾ.22:ತಿಂಡಿ ತಿಂದು ಹಣ ನೀಡುವ ಬದಲಾಗಿ ಹೊಟೇಲ್ ಮಾಲಿಕ ನಿವೃತ್ತ ಸೈನಿಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಆರೋಪಿಗಳನ್ನು ಆಳಂದ್ ಠಾಣೆಯ ಪೋಲಿಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.
ಜಿಲ್ಲೆಯ ಆಳಂದ್ ಪಟ್ಟಣದ ಸತ್ತೋದ್ದೀನ್ ಅನ್ಸಾರಿ ಮತ್ತು ಮಾರುತಿ ಬಂಧಿತ ಆರೋಪಿಗಳು. ಆಳಂದ್ ಪಟ್ಟಣದಲ್ಲಿ ಕಳೆದ ಶುಕ್ರವಾರ ಸಂಜೆ ಕುಡಿದ ಮತ್ತಿನಲ್ಲಿ ಹೊಟೇಲ್‍ಗೆ ನುಗ್ಗಿದ ಆರೋಪಿಗಳು 72 ವರ್ಷ ವಯಸ್ಸಿನ ಹಿರಿಯ ಜೀವ ಹಾಗೂ ಮಾಜಿ ಸೈನಿಕ ಹರಿನಂದ್ ಕೊಡಮೂಡ್ ಅವರನ್ನು ಹಿಗ್ಗಾಮುಗ್ಗಾ ಥಳಿಸಿ ಪರಾರಿಯಾಗಿದ್ದರು.
ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಭಾರತ- ಚೀನಾ ಯುದ್ಧದ ವೇಳೆ ಶತೃಗಳನ್ನು ಸದೆಬಡೆದ ಅವರ ಸೇವೆಯನ್ನು ಗುರುತಿಸಿ ಭಾರತೀಯ ಸೇನೆ ಅವರಿಗೆ ಎರಡು ಪದಕಗಳನ್ನು ನೀಡಿ ಗೌರವಿಸಿದೆ. ಅಂತಹ ದೇಶದ ವೀರ ಯೋಧನ ಮೇಲೆ ಹಲ್ಲೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈಗ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.