ನಿವೃತ್ತ ವೈದ್ಯನ ಛಾಯಾಚಿತ್ರಗ್ರಹಣ ಪ್ರೇಮ

ನಾಗರಾಜ ಹೂವಿನಹಳ್ಳಿ
ಮನುಷ್ಯನಿಗೆ ಸಮಯದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ. ಆದರೆ ಛಾಯಾಚಿತ್ರ ಓಡುವ ಕಾಲವನ್ನು ಹಿಡಿದಿಡುತ್ತದೆ ಎನ್ನುವ ಮಾತಿದೆ. ಈ ಮಾತಿಗೆ ಅನ್ವರ್ಥಕವಾಗುವಂತೆ ನಿವೃತ್ತ ವೈದ್ಯರೊಬ್ಬರು ವಿದ್ಯಾರ್ಥಿ ಜೀವನದಿಂದ ಬೆಳೆಸಿಕೊಂಡು ಬಂದ ಛಾಯಾಚಿತ್ರ ತೆಗೆಯುವ ಹವ್ಯಾಸ ಅವರನ್ನು ಈಗಲೂ ಸಹ ಕ್ರಿಯಾಶೀಲವಾಗಿ ಇರಿಸಿದೆ.
ವಿದ್ಯಾರ್ಥಿ ಜೀವನದಲ್ಲಿಯೇ ಬೆಳೆದ ಈ ಹವ್ಯಾಸವನ್ನು ಅವರು ಹಾಗೇ ಕಾಪಿಟ್ಟುಕೊಂಡು ಬಂದಿದ್ದಾರೆ. ಇತ್ತೀಚೆಗೆ ಅವರು ತೆಗೆದ ಅಂತಿಗೊನೆ ನಾಟಕದ ದೃಶ್ಯವೊಂದು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ. ಆ ಚಿತ್ರ ತೆಗೆದದ್ದು ಮತ್ತಾರೂ ಅಲ್ಲ. ಕಲಬುರಗಿಯ ಹಿರಿಯ ಹವ್ಯಾಸಿ ಛಾಯಾಚಿತ್ರಗಾರರಾದ ಡಾ.ಎಂ.ಡಿ.ಮಿಣಜಗಿ ಅವರು.
1965ರಲ್ಲಿ ಮೆಡಿಕಲ್ ಕಾಲೇಜು ಸೇರಿದ ಮಿಣಜಗಿ ಅವರಿಗೆ ಕಾಲೇಜಿನ ವಾರ್ಷಿಕೋತ್ಸವದಂದು ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ ಗಮನ ಸೆಳೆಯುವುದರ ಜೊತೆಗೆ ಅವರಲ್ಲಿ ಛಾಯಾಚಿತ್ರದ ಬಗ್ಗೆ ಆಸಕ್ತಿ ಕೆರಳಿಸಿ ಛಾಯಾಚಿತ್ರ ತೆಗೆಯುವ ಹವ್ಯಾಸವನ್ನು ಬೆಳೆಸಿಕೊಳ್ಳಲು ಕಾರಣವಾಗುತ್ತದೆ. ವೈದ್ಯಕೀಯ ಶಿಕ್ಷಣದ ಓದಿನ ಜೊತೆಜೊತೆಗೆ ಅವರು ಛಾಯಾಚಿತ್ರ ತೆಗೆಯುವ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗುತ್ತಾರೆ. ಈ ಹವ್ಯಾಸ ಅವರನ್ನು ರಂಗನತಿಟ್ಟು, ಬೆಂಗಳೂರಿನ ನಂದಿ ಹಿಲ್ಸ್‍ಗಳಿಗೂ ಕರೆದುಕೊಂಡು ಹೋಗಿದ್ದು, ಇದುವರೆಗೆ ಅವರು ಅನೇಕ ಅಪರೂಪದ ಛಾಯಾಚಿತ್ರಗಳನ್ನು ತಮ್ಮ ಒಳಗಣ್ಣಿನ ಮೂಲಕ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸ್ಮಾರಕಗಳು, ವಿವಿಧ ಪಕ್ಷಿಗಳು, ಪ್ರಾಣಿಗಳು ಸೇರಿದಂತೆ ಅಪರೂಪದ ಛಾಯಾಚಿತ್ರಗಳನ್ನು ಅವರು ತೆಗೆದಿದ್ದಾರೆ. ಕಲಬುರಗಿಯ ಚೈತನ್ಯಮಯಿ ಆರ್ಟ್ ಗ್ಯಾಲರಿಯಲ್ಲಿ ಹತ್ತು ಬಾರಿ ಅವರ ಛಾಯಾಚಿತ್ರಗಳ ಪ್ರದರ್ಶನವಾಗಿದೆ. ಇಷ್ಟಾಗಿಯೂ ಎಲೆ ಮರೆಯಕಾಯಿಯಂತಿರುವ ಡಾ.ಮಿಣಜಗಿ ಅವರು ಆನ್‍ಲೈನ್‍ನಲ್ಲಿ ನಡೆಯುವ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಅನೇಕ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ರುಕ್ಮಾಪುರದಲ್ಲಿ ಜನಿಸಿದ ಮಿಣಜಗಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ರುಕ್ಮಾಪುರದಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಸುರಪುರದಲ್ಲಿ, ಕಾಲೇಜು ಶಿಕ್ಷಣವನ್ನು ಕಲಬುರಗಿಯ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪೂರೈಸಿ ಹುಬ್ಬಳ್ಳಿಯ ಕರ್ನಾಟಕ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು 1969ರಲ್ಲಿ ವಿಜಯಪುರದಲ್ಲಿ ಸಹಾಯಕ ಶಸ್ತ್ರ ಚಿಕಿತ್ಸಕರಾಗಿ ಸೇವೆಗೆ ಸೇರುತ್ತಾರೆ. ನಂತರ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ ಸೇರಿದ ಡಾ.ಮಿಣಜಗಿ ಅವರು 1998 ರಲ್ಲಿ ವಿಜಯಪುರದಲ್ಲಿಯೇ ಮೆಡಿಕಲ್ ಸೂಪರಿಟೆಂಡೆಂಟ್ ಆಗಿ ನಿವೃತ್ತರಾಗುತ್ತಾರೆ. ಸದ್ಯ ಕಲಬುರಗಿಯ ವಿಶ್ವೇಶ್ವರಂiÀi್ಯ ನಗರದಲ್ಲಿ ನಿವೃತ್ತ ಜೀವನ ಕಳೆಯುತ್ತಿರುವ ಡಾ.ಮಿಣಜಗಿ ಅವರು ವಿದ್ಯಾರ್ಥಿ ಜೀವನದಿಂದ ಬೆಳೆಸಿಕೊಂಡು ಬಂದು ಛಾಯಾಚಿತ್ರ ತೆಗೆಯುವ ಹವ್ಯಾಸವನ್ನು ಹಾಗೆಯೇ ಮುಂದುವರೆಸಿಕೊಂಡು ಬಂದು ಈಗಲೂ ಸಹ ಛಾಯಾಚಿತ್ರಗಳನ್ನು ತೆಗೆಯುತ್ತಾರೆ. ಇದುವರೆಗೂ ಅವರು ತೆಗೆದ 2 ಸಾವಿರಕ್ಕೂ ಅಧಿಕ ಅಪರೂಪದ ಛಾಯಾಚಿತ್ರಗಳು ಅವರ ಸಂಗ್ರಹದಲ್ಲಿವೆ.
1965 ರಿಂದಲೇ ಛಾಯಾಚಿತ್ರ ತೆಗೆಯುವ ಹವ್ಯಾಸ ಬೆಳೆಸಿಕೊಂಡು ಬಂದು ಡಾ.ಮಿಣಜಗಿ ಅವರು, ಅವರು ಸೆರೆ ಹಿಡಿದ ಛಾಯಾಚಿತ್ರಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಗೆ ಕಳುಹಿಸಿ ಅನೇಕ ಪ್ರಶಸ್ತಿ ಮತ್ತು ನೆನಪಿನ ಕಾಣಿಕೆಗಳನ್ನು ಪಡೆದಿದ್ದಾರೆ. ಕಲಬುರಗಿ ನಗರದ ಚೈತನ್ಯಮಯಿ ಆರ್ಟ್ ಗ್ಯಾಲರಿಯಲ್ಲಿ ಅನೇಕ ಬಾರಿ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಮತ್ತು ಅನೇಕ ಕಡೆ ಸಮೂಹ ಪ್ರದರ್ಶನಗೊಂಡಿವೆ.
ತಮ್ಮ ಬಿಡುವಿನ ವೇಳೆಯನ್ನು ಕನ್ನಡ ಮತ್ತು ಹಿಂದಿ ಹಳೆಯ ಚಿತ್ರಗೀತೆಗಳನ್ನು, ಭಾವಗೀತೆಗಳನ್ನು ಆಲಿಸುವ ಡಾ.ಮಿಣಜಗಿ ಅವರು, ಈಗಲೂ ಸಹ ಕ್ಯಾಮೆರಾ ಕೈಯಲ್ಲಿ ಹಿಡಿದುಕೊಂಡು ಪ್ರವಾಸಿ ತಾಣಗಳಿಗೆ ಹೋಗಿ ಛಾಯಾಚಿತ್ರಗಳನ್ನು ತೆಗೆಯುತ್ತಾರೆ.
“ವಿದ್ಯಾರ್ಥಿ ಜೀವನದಲ್ಲಿಯೇ ಛಾಯಾಚಿತ್ರ ತೆಗೆಯುವ ಹವ್ಯಾಸ ಬೆಳೆಯಿತು. ಆಗ ಈಗಿನಂತೆ ಕಲರ್ ಫೋಟೋಗಳಿರಲಿಲ್ಲ. ಬ್ಲ್ಯಾಕ್ ಆ್ಯಂಡ್ ವೈಟ್ ಚಿತ್ರಗಳನ್ನು ತೆಗೆಯಬೇಕಿತ್ತು. ಆಗಿನ ಕಾಲದಲ್ಲಿ ಸಿಗುತ್ತಿದ್ದ ಆಗ್ಫಾ ಕ್ಯಾಮೆರಾ ಬಳಸಿ ಅನೇಕ ಚಿತ್ರಗಳನ್ನು ತೆಗೆದಿದ್ದೇನೆ. ಈಗ ನಿಕಾನ್ ಕ್ಯಾಮೆರಾ ಬಳಸಿ ಛಾಯಾಚಿತ್ರ ತೆಗೆಯುತ್ತಿದ್ದೇನೆ. ಫೋಟೋಗ್ರಾಫಿ ಒಂದು ಕಲೆ, ತಂತ್ರಜ್ಞಾನ ಅದೆಷ್ಟೇ ಮುಂದುವರೆದಿದ್ದರೂ ಛಾಯಾಗ್ರಾಹಕನಿಗೆ ಒಳಗಣ್ಣು ಇರಬೇಕು, ಬೆಳಕಿನ ಜೊತೆಗೆ ನೆರಳನ್ನು ಸಮ ಪ್ರಮಾಣದಲ್ಲಿ ಹಿಡಿಯುವ ಕುಶಲತೆ, ಕಲೆಗಾರಿಕೆ ಬೇಕು, ಕೆಮೆರಾಕ್ಕಿಂತಲೂ ಅದರ ಹಿಂದಿರುವ ಕಣ್ಣುಗಳು ಮುಖ್ಯ. ಒಂದು ಉತ್ತಮ ಛಾಯಾಚಿತ್ರ ಅಪಾರವಾದ ತಾಳ್ಮೆ, ಶಿಸ್ತು, ಶ್ರದ್ಧೆ ಬಯಸುತ್ತದೆ. ಇದೆಲ್ಲವೂ ಒಬ್ಬ ಛಾಯಾಗ್ರಾಹನಲ್ಲಿದ್ದರೆ ಒಂದು ಉತ್ತಮ ಛಾಯಾಚಿತ್ರ ತೆಗೆಯಲು ಸಾಧ್ಯ” ಎನ್ನುತ್ತಾರೆ ಡಾ.ಎಂ.ಡಿ.ಮಿಣಜಗಿ ಅವರು.
“ಛಾಯಾಚಿತ್ರ ತೆಗೆಯಲು ಬಂಗಾರದ ಸಮಯ (ಗೋಲ್ಡನ್ ಅವರ್) ಅಂತ ಒಂದಿರುತ್ತದೆ. ಬೆಳಗಿನಜಾವ, ಇಲ್ಲವೇ ಸಾಯಂಕಾಲದ ಮಂದ ಬೆಳಕಿನಲ್ಲಿ ತೆಗೆಯುವ ಛಾಯಾಚಿತ್ರ ಉತ್ತಮವಾಗಿರುತ್ತದೆ” ಎನ್ನುವುದು ಡಾ.ಮಿಣಜಗಿ ಅವರ ಅನುಭವದ ಮಾತು.
ಹವ್ಯಾಸಿ ಛಾಯಾಗ್ರಾಹಕರಾದ ಡಾ.ಮಿಣಜಗಿ ಅವರು ನಿವೃತ್ತಿಯ ನಂತರದ ಜೀವನದಲ್ಲೂ ಛಾಯಾಚಿತ್ರಗಳನ್ನು ತೆಗೆದು, ಅವುಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಗಳಿಗೆ ಕಳುಹಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದರೂ ಎಲೆ ಮರೆಯ ಕಾಯಿಯಂತೆ ಬದುಕುತ್ತಿದ್ದಾರೆ. ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಅವರ ಈ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಿದೆ.

ಅಂತರಾಷ್ಟ್ರೀಯ ಪ್ರಶಸ್ತಿ
ಹವ್ಯಾಸಿ ಛಾಯಾಚಿತ್ರಕಾರ ಡಾ.ಎಂ.ಡಿ.ಮಿಣಜಗಿಯವರು ರುಮೇನಿಯಾದಲ್ಲಿ ಈಚೆಗೆ ನಡೆದ 8ನೇ ಕ್ಯಾಂಪೀನಾ 2023 ಅಂತರ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ಛಾಯಚಿತ್ರಗಳಿಗೆ ಎಕ್ಸಪಟೇನ್ಸ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಅವುಗಳಲ್ಲಿ ಒಂದಾದ ಟ್ರಾಜಿಕ್ ಎಂಡ್ ಶೀರ್ಷಿಕೆಯ ಛಾಯಾಚಿತ್ರವು ಕಲಬುರಗಿಯ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಎಂಟಿಗೋನಿ ಎಂಬ ಸುಂದರ ನಾಟಕದ ಒಂದು ದೃಶ್ಯವಾಗಿದೆ.