ನಿವೃತ್ತ ಯೋಧ ಪಾಟೀಲಗೆ ಸ್ವಾಗತಿಸಿ,ಸನ್ಮಾನÀ

ಕೆರೂರ,ಜ7: ಭಾರತ ದೇಶದ ವಿವಿದೆಡೆ 17 ವರ್ಷ ಕಾಲ ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿ ಈಚೆಗೆ ನಿವೃತ್ತಿ ಪಡೆದು ಹುಟ್ಟೂರಿಗೆ ಮರಳಿದ ಕೆರೂರ ಸಮೀಪದ ಯಂಡಿಗೇರಿ ಗ್ರಾಮದ ಬಸವನಗೌಡ ಪಾಟೀಲ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸೋಮವಾರದಂದು ಸ್ವಾಗತಿಸಿದರು.
ನಾನಾ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ ಹಿಂದುರಿಗಿದ ಅವರನ್ನು ಸುತ್ತಮುತ್ತಲಿನ ಗ್ರಾಮಸ್ಥರು, ನಿವೃತ್ತ ಯೋಧರು ಸೇರಿ ಡೋಳ್ಳು ಬಾಜಾ ಭಜಂತ್ರಿ ವಾದ್ಯಮೇಳದೊಂದಿಗೆ ಅಲಂಕೃತಗೊಂಡ ತೆರೆದ ವಾಹನದಲ್ಲಿ ವೈಭವದ ಮೆರವಣಿಗೆ ಮಾಡಿದರು.ಈ ವೇಳೆ ಧ್ವನಿವರ್ಧಕದಲ್ಲಿ ಮೊಳಗಿದ ದೇಶಭಕ್ತಿ ಗೀತೆಗಳು ಯೋಧರ ಅಭಿಮಾನಿಗಳನ್ನು ರೋಮಾಂಚ ನಗೊಳಿಸಿದವು.
ನಿವೃತ್ತ ಯೋಧ ಹುಟ್ಟೂರಿಗೆ ಕಾಲಿಡುತ್ತಿದ್ದಂತೆ ಮಹಿಳೆಯರು ಆರತಿ ಬೆಳಗುವ ಮೂಲಕ ಸಡಗರದೊಂದಿಗೆ ಸ್ವಾಗತಿಸಿದರು.ಮೆರವಣಿಗೆ ಉದ್ದಕ್ಕೂ ದೇಶ ಹಾಗೂ ಸೈನಿಕರ ಪರ ಗ್ರಾಮಸ್ಥರು, ಯುವಕರಿಂದ ಜೈಕಾರ ಮೊಳಗಿದವು.
ಬಳಿಕ ನಡೆದ ಸಮಾರಂಭದಲ್ಲಿ ಅನೇಕ ಹಿರಿಯ ಮುಖಂಡರು, ಮಠಾಧೀಶರು, ಅಧಿಕಾರಿಗಳು, ನಿವೃತ್ತ ಯೋಧರು ಶಿಕ್ಷಕರು ಯೋಧನಿಗೆ ಸನ್ಮಾನಿಸಿ ಗೌರವಿಸಿದರು.
ನಿವೃತ್ತ ಯೋಧ ಬಸವನಗೌಡ ಪಾಟೀಲ ಮಾತನಾಡಿ, ಮನೆ ಮಂದಿ ಬಂಧು-ಬಳಗ ಬಿಟ್ಟು ದೇಶದ ಸೇವೆ ಮಾಡಿದ್ದಕ್ಕೆ ಈ ತಾವು ನೀಡಿದ ಗೌರವಕ್ಕೆ ಚಿರಋಣಿಯಾಗಿರುತ್ತೇನೆ.ನಾನೀಗ ನಿವೃತ್ತಿ ಪಡೆದಿದ್ದರು ದೇಶಕ್ಕಾಗಿ ಅಗತ್ಯವೆನಿಸಿದರೆ ಯಾವುದೇ ಸಂದರ್ಭದಲ್ಲಿ ಸೈನಿಕ ಕಾಯಕಕ್ಕೆ ಮರಳಲು ಸದಾ ಸಿದ್ಧವಿರುವದಾಗಿ ಹೇಳಿದರು.ನಮ್ಮ ಸೇನೆಯನ್ನು ಶತೃ ದೇಶಗಳು ಸೋಲಿಸಲು ಸಾಧವಿಲ್ಲ. ಇಡೀ ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಟ ಸೈನ್ಯ ನಮ್ಮದಾಗಿದೆ ಎಂದು ತಿಳಿಸಿದರು.
ಸಾನಿಧ್ಯವನ್ನು ಡಾ.ಮೌನೇಶ್ವರ ಮಹಾಪುರುಷ ಸ್ವಾಮಿಗಳು ಮಳೆ ರಾಜೇಂದ್ರಮಠ ಗದ್ದನಕೇರಿ ಆರ್ಶಿವಚನ ನೀಡಿದರು.
ಅಧ್ಯಕ್ಷತೆಯನ್ನು ಮಲ್ಲಪ್ಪ ಗಾಣಿಗೇರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಲಕ್ಷ್ಮಣ ಮಂಟೂರ, ರವಿ ಪಡಸಲಗಿ, ಮಂಜುನಾಥ ಪಡಸಲಗಿ, ಈಶ್ವರ ಅಂಗಡಿ, ನಾಗಪ್ಪ ಕುಂಬಾರ, ಬಸವರಾಜ ಪೂಜಾರ, ಬಸವರಾಜ ಶೀಲವಂತರ, ಯಮನಪ್ಪ ತುಂಬರಮಟ್ಟಿ, ಮಹಾದೇವ ಶೀಲವಂತರ, ರಾಜೇಸಾಬ ಮೊಖಾಸಿ ಮುಂತಾದವರು ಭಾಗವಹಿಸಿದ್ದರು.
ಶಿಕ್ಷಕರಾದ ಎಂ.ಸಿ. ಜುಮ್ಮನ್ನವರ ನಿರೂಪಿಸಿದರು.ಎಸ್.ಎಸ್. ನಾಗನೂರ ವಂದಿಸಿದರು.