ನಿವೃತ್ತ ಪ್ರಾಚಾರ್ಯ ವಿ ಬಿ ಅಡ್ಡಮನಿ ಇನ್ನಿಲ್ಲ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ. 16 :- ಪಟ್ಟಣದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ವಿ ಬಿ ಅಡ್ಡಮನಿ (78) ಇಂದು ಬೆಳಿಗ್ಗೆ 6 ಗಂಟೆಗೆ ತಮ್ಮ ಸ್ವಗೃಹದಲ್ಲಿ  ವಯೋಸಹಜವಾಗಿ  ನಿಧನರಾಗಿದ್ದಾರೆ.
ಹಿರೇಕೆರೂರು ತಾಲೂಕಿನ ರಟ್ಟೇನಹಳ್ಳಿಯ ಮೂಲದವರಾದ ವೀರಸಂಗಪ್ಪ ಬಸವಣ್ಯಪ್ಪ ಅಡ್ಡಮನಿ ಅವರು ತಮ್ಮ ಹಡಗಲಿ ಪಟ್ಟಣದ ಅಕ್ಕನ ಮನೆಯಲ್ಲಿ ವ್ಯಾಸಂಗ ಪಡೆದುಕೊಂಡು ಅರ್ಥಶಾಸ್ತ್ರ ಉಪನ್ಯಾಸಕರಾಗಿ 1973ರಿಂದ ಸೇವೆ ಆರಂಭಿಸಿ ಸೇಡಂ, ಹರಪನಹಳ್ಳಿ, ಕೂಡ್ಲಿಗಿ, ಬಳ್ಳಾರಿ, ಚೋರುನೂರು ಕಾಲೇಜ್ ನಲ್ಲಿ ಸೇವೆ ಸಲ್ಲಿಸಿದರು. ಬಳ್ಳಾರಿ ಪ್ರಭಾರಿ ಉಪನಿರ್ದೇಶಕರಾಗಿ, ಕೂಡ್ಲಿಗಿ ಹಾಗೂ ಚೋರುನೂರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ಅಪಾರ ಸೇವೆ ಸಲ್ಲಿಸಿ ಸಾವಿರರೂ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದ ಇವರು 2003ರಲ್ಲಿ ಸೇವೆಯಿಂದ ನಿವೃತ್ತರಾದರು.
ಇವರು ಪತ್ನಿ, ಐವರು ಪುತ್ರಿಯರು ಹಾಗೂ ಅಳಿಯಂದಿರು, ಮೊಮ್ಮಕ್ಕಳು ಅಪಾರ ಸ್ನೇಹಿತರ ಬಳಗ, ಹಳೇ ವಿದ್ಯಾರ್ಥಿಗಳ ಸಮೂಹ, ಬಂಧುಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಕೂಡ್ಲಿಗಿ ಪಟ್ಟಣದ ಹೊರವಲಯದ ಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಾವಿನಲ್ಲೂ ಮಾನವೀಯತೆ, ನೇತ್ರದಾನ : ಇಂದು ಬೆಳಿಗ್ಗೆ ನಿಧನರಾದ ನಿವೃತ್ತ ಪ್ರಾಂಶುಪಾಲರಾದ ವಿ ಬಿ ಅಡ್ಡಮನಿ ಅವರ  ಎರಡು ಕಣ್ಣುಗಳನ್ನು ಅಂಧರ ಬಾಳಿಗೆ ಬೆಳಕಾಗಿಸಲು  ದಾನ ಮಾಡುವ ಮೂಲಕ  ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಬಳ್ಳಾರಿ ವಿಮ್ಸ್ ನ ನೇತ್ರತಜ್ಞರಾದ ಡಾ ಪೂಜಾ ಹಾಗೂ ತಂಡದವರುಶಸ್ತ್ರಚಿಕಿತ್ಸೆ ನಡೆಸಿ ಕಣ್ಣುಗಳನ್ನು ಅಡ್ಡಮನಿ ಕುಟುಂಬದವರಿಂದ ದಾನವಾಗಿ ಪಡೆದುಕೊಂಡರು.