ನಿವೃತ್ತ ಪೊಲೀಸರ ಕ್ಷೇಮಾಭಿವೃದ್ದಿಗೆ ಇಲಾಖೆಯಿಂದ ವಿವಿಧ ಯೋಜನೆಗಳು: ಟಿ.ಶ್ರೀಧರ್

ಕೊಪ್ಪಳ ಏ 05 , : ಸೇವೆಯಲ್ಲಿದ್ದು ನಿವೃತ್ತರಾಗಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ದಿಗೆ ಪೋಲಿಸ್ ಧ್ವಜ ದಿನಾಚರಣೆ ದಿನ ಧ್ವಜಗಳನ್ನು ಮಾರಾಟ ಮಾಡುವ ಮೂಲಕ ನಿಧಿಯನ್ನು ಸಂಗ್ರಹಿಸಲಾಗುತ್ತದೆ. ಇದನ್ನು ನಿವೃತ್ತರ ಕ್ಷೇಮಾಭಿವೃದ್ದಿಗೆ ಬಳಸಲಾಗುತ್ತದೆ. ಇದಕ್ಕೆ ಎಲ್ಲ ಸಾರ್ವಜನಿಕರ ಸಹಕಾರ ಬೇಕು ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಟಿ.ಶ್ರೀಧರ್ ಹೇಳಿದರು. ಶುಕ್ರವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪಿಎಸ್ಐ ಪರಸಪ್ಪ, ಅತಿಥಿಗಳಾಗಿ ನಿವೃತ್ತ ಎಎಸ್ಐ ರಮೇಶ ಪದಕಿ, ಸಿಎಚ್ಸಿ ಸುಂಕಪ್ಪ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಆಕರ್ಷಕ ಗೌರವವಂದನೆ, ಪಥಸಂಚಲನ, ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜಗಳ ಆಗಮನ ಮತ್ತು ನಿರ್ಗಮನ ನಡೆಯಿತು. ಸೇವಾ ನಿವೃತ್ತರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ವೇಳೆ ನೂತನ ಡಿ.ಎಸ್.ಪಿ ಗೀತಾ ಬೆನಹಾಳ, ಡಿಆರ್‌ ಡಿ.ಎಸ್.ಪಿ ಶಶಿಧರ , ಸಿಪಿಐಗಳಾದ ರವಿ ಉಕ್ಕುಂದ, , ಮೌನೇಶ್ವರ್ ಪಾಟೀಲ್, ವಿಶ್ವನಾಥ ಹಿರೇಗೌಡರ್, ನಾಗರೆಡ್ಡಿ ಸೇರಿದಂತೆ ಜಿಲ್ಲೆಯ ಇತರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಗಂಗಾವತಿಯ ಡಿ.ಎಸ್.ಪಿ ಆರ್.ಎಸ್. ಉಜ್ಜನಿಕೊಪ್ಪ ಸ್ವಾಗತಿಸಿದರೆ, ನಗರ ಠಾಣೆಯ ಸಿಪಿಐ ಮಾರುತಿ ಗುಳ್ಳಾರಿ ವಂದಿಸಿದರು.