ನಿವೃತ್ತ ನೌಕರರಿಗೆ ಸನ್ಮಾನ ಆಯೋಜನೆ ಶ್ಲಾಘನೀಯ:ಸಿದ್ದಣ್ಣ ಕೊಲ್ಲಾರ

ಬೀದರ:ನ.13:ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಮಹಾಸಭೆಯು ನೂತನ ಅಧ್ಯಕ್ಷ
ನಾಗಪ್ಪ ಜಂಬಗಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಗೆ ಕಲಬುರಗಿ ವಿಭಾಗದ ಸರಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ಸಿದ್ದಣ್ಣಾ ಕೊಲ್ಲಾರ ಇವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಬರುವ ಡಿಸೆಂಬರ್ ತಿಂಗಳಿನಲ್ಲಿ 80 ವರ್ಷದ ನಿವೃತ್ತ ನೌಕರರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ನಿರ್ಧರಿಸಿದ್ದು ತುಂಬಾ ಶ್ಲಾಘನೀಯವಾಗಿದೆ ಎಂದು ಹೇಳಿದರು. ಅಲ್ಲದೇ ನಿವೃತ್ತರಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯದ ಬಗ್ಗೆ ಸಮಿತಿ ರಚಿಸಿದ್ದಾರೆ. 7ನೇ ವೇತನ ಆಯೋಗ ಈಗಾಗಲೇ ರಚಿಸಿದ್ದು, ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಬಿ. ಕುಚಬಾಳ ಅವರು ಸರ್ವರನ್ನು ಸ್ವಾಗತಿಸಿ, ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಸಭೆಯ ಮುಂದಿಟ್ಟರು. ಸಂಘದಲ್ಲಿ ಈಗಾಗಲೇ ಖಾಲಿಯಾಗಿರುವ ಕೆಲವು ಹುದ್ದೆಗಳನ್ನು ಸರ್ವಾನುಮತದಿಂದ ತುಂಬಲಾಯಿತು. ಮಹಮ್ಮದ ನವಾಜ್ ಗೌರವ ಅಧ್ಯಕ್ಷರಾಗಿ, ಭಿಕ್ಕುಮಿಯಾ, ಯುಸುಫ್ ಹಾಶ್ಮಿ, ಮಲ್ಲಪ್ಪ ಮಂಠಾಳ ಇವರಿಗೆ ನೂತನ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಎಂ.ಎ. ರಶೀದ, ಶ್ರೀಮತಿ ಮೆಹೆರುನ್ನಿಸಾ ಬೇಗಂ ಅವರಿಗೆ ಸಂಘಟನಾ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಯಿತು, ಹಾಗೂ ನಿವೃತ್ತ ಡಿ.ವೈ.ಎಸ್.ಪಿ. ಶಿವಾನಂದ ಗಟ್ಟಿ, ದೇವೆಂದ್ರ ಡಿಗ್ಗಿಯವರಿಗೆ ಸಂಘದ ನೂತನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ಸಂಘದ ಖಜಾಂಚಿ ಸೈಯದ ಅಲಿಮೊದ್ದೀನ್ ಅವರು ಖರ್ಚು ವೆಚ್ಚಗಳ ಮಾಹಿತಿ ನೀಡಿದರು, ಅಧ್ಯಕ್ಷ ನಾಗಪ್ಪ ಜಂಬಗಿಯವರು ಬೀದರ ಜಿಲ್ಲೆಯಲ್ಲಿ ನಿವೃತ್ತ ನೌಕರರು ಸಂಘದ ಸದಸ್ಯರಾಗಲು ವಿನಂತಿಸಿಕೊಂಡರು. ಸನ್ಮಾನ ಸಭೆಗೆ ಮಾನ್ಯ ಶಾಸಕರನ್ನು, ರಾಜ್ಯ ಸಮಿತಿಯ ಉಪಾಧ್ಯಕ್ಷರನ್ನು ಕರೆಸಲು ನಿರ್ಧರಿಸಲಾಯಿತು, ವಂದನೆಗಳೊಂದಿಗೆ ಸಭೆ ಮುಕ್ತಾಯವಾಯಿತು.